ಪರವಾನಿಗೆ ರಹಿತ ಅಂಗಡಿ ಮಳಿಗೆಗಳಿಗೆ ಬೀಗ ಜಡಿದ ಅಧಿಕಾರಿಗಳು

Update: 2016-07-18 13:58 GMT

ಮಂಗಳೂರು, ಜು.18; ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಗಳಿಗೆ ಮತ್ತು ಉದ್ದಿಮೆ ಪರವಾನಿಗೆ ಹೊಂದಿಲ್ಲದೆ ಇರುವ ಅಂಗಡಿಗಳಿಗೆ ಇಂದು ಮಂಗಳೂರು ಮಹಾನಗರಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ ಉದ್ದಿಮೆ ಪರವಾನಿಗೆ ಇಲ್ಲದ 8 ಅಂಗಡಿಗಳಿಗೆ ಬೀಗ ಜಡಿದಿದ್ದಾರೆ.

ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪರಿಸರ ಇಂಜಿನಿಯರ್ ಮಧು, ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ನೇತೃತ್ವದಲ್ಲಿ ಇಂದು ನಗರದ ಹಂಪನಕಟ್ಟೆಯ ವಿವಿಧ ಅಂಗಡಿಗಳಿಗೆ ದಾಳಿ ನಡೆಸಲಾಗಿತ್ತು.
  
ಅಧಿಕಾರಿಗಳು ಇಂದು ದಾಳಿ ನಡೆಸುವ ಸಂದರ್ಭದಲ್ಲಿ ನಗರದ ಯಾವ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಮಾರಾಟ ಪತ್ತೆಯಾಗಿಲ್ಲ. ಪರವಾನಿಗೆ ಹೊಂದಿಲ್ಲದೆ ಇರುವ 8 ಅಂಗಡಿಗಳಿಗೆ ಬೀಗ ಜಡಿದಿರುವ ಪಾಲಿಕೆ ಅಧಿಕಾರಿಗಳು ಅಂಗಡಿ ಮಾಲಕರಿಗೆ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ.

ಕಾರ್ಯಾಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕವಿತಾ ಸನಿಲ್, ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಜೂ.30ರವರೆಗೆ ಗಡುವು ನೀಡಲಾಗಿತ್ತು. ಆದರೂ ಬಹುತೇಕ ಅಂಗಡಿಯವರು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನೂ ಕೂಡ 7782 ಪರವಾನಿಗೆ ನವೀಕರಣಕ್ಕೆ ಬಾಕಿ ಇದೆ. ಈಗಾಗಲೇ ಈ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ . ಉದ್ದಿಮೆ ಪರವಾನಿಗೆ ನವೀಕರಣ ಮತ್ತು ಹೊಸ ಪರವಾನಿಗೆ ನೀಡಿಕೆ ಸೇರಿ ಒಟ್ಟು 21 ಲಕ್ಷ ಆದಾಯ ಸಂಗ್ರಹ ಆಗಿದೆ. 45 ಲಕ್ಷ ಆಸ್ತಿ ತೆರಿಗೆ ಸಂಗ್ರಹವಾಗಿದೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಆಗುವವರೆಗೂ ಕಾರ್ಯಾಚರಣೆ ಮುಂದುವರಿಸಲಾಗುವುದು. ಅಲ್ಲದೆ ಉದ್ದಿಮೆ ಪರವಾನಿಗೆ ಇಲ್ಲದೇ ಕಾರ್ಯಾಚರಿಸುತ್ತಿರುವ ಅಂಗಡಿಗಳ ವಿರುದ್ಧ ಸೂಕ್ತ ಕ್ರಮವನ್ನು ಪಾಲಿಕೆ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News