ಗರ್ಭಿಣಿ ಮಹಿಳೆಯರ ಮಾಹಿತಿ ಪಡೆಯಿರಿ: ಆರೋಗ್ಯ ಇಲಾಖೆಗೆ ದ.ಕ. ಜಿಲ್ಲಾಧಿಕಾರಿ ಸೂಚನೆ

Update: 2016-07-18 18:48 GMT

ಮಂಗಳೂರು, ಜು.18: ಗರ್ಭಿಣಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಜಿಲ್ಲೆಯಲ್ಲಿರುವ ಎಲ್ಲಾ ಗರ್ಭಿಣಿಯರ ಮಾಹಿತಿಗಳನ್ನು ಆರೋಗ್ಯ ಇಲಾಖೆ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಸೂಚಿಸಿದ್ದಾರೆ.

ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜನನಪೂರ್ವ ಲಿಂಗನಿರ್ಣಯ ತಡೆ ಕಾಯ್ದೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ತಿಂಗಳಿಗೆ ಸರಾಸರಿ 2,300 ಹೆರಿಗೆಗಳಾಗುತ್ತಿವೆ. ಇದರಲ್ಲಿ ಅಂದಾಜು 200ರಷ್ಟು ಪ್ರಕರಣಗಳಲ್ಲಿ ಹೆರಿಗೆ ಅತಿ ಗಂಭೀರ(ಹೈರಿಸ್ಕ್) ಪ್ರಕರಣಗಳಾಗಿವೆ. ಈ ನಿಟ್ಟಿನಲ್ಲಿ ತಾಯಿ-ಮಗುವಿನ ಆರೋಗ್ಯ ದೃಷ್ಟಿಯಿಂದ ಗಂಭೀರ ಪ್ರಕರಣಗಳ ಮಾಹಿತಿ ಮೊದಲೇ ದೊರೆತರೆ ಹೆರಿಗೆ ಸಂದರ್ಭದಲ್ಲಿ ಆ ಮಹಿಳೆಗೆ ಎಲ್ಲಾ ರೀತಿಯ ಚಿಕಿತ್ಸೆ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಅನೇಕ ಸಂದರ್ಭಗಳಲ್ಲಿ ಪ್ರಸವಕ್ಕಿಂತ ಮೊದಲು ಕ್ಲಿಷ್ಟಕರ ಪ್ರಕರಣ ಎಂದು ಗೊತ್ತಿದ್ದರೂ ಸೂಕ್ತ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸದೆ ಹೆರಿಗೆಯ ನಂತರ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಬೇರೆ ಆಸ್ಪತ್ರೆಗಳಿಗೆ ಕಳುಹಿಸುವ ಪ್ರಕರಣಗಳು ನಡೆಯುತ್ತಿವೆ. ಇದು ತಾಯಿ-ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿ ಪ್ರಾಣಕ್ಕೆ ಅಪಾಯ ಉಂಟಾದ ಅನೇಕ ಪ್ರಕರಣಗಳು ನಡೆದಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳು ತಮ್ಮ ವ್ಯಾಪ್ತಿಯ ಗರ್ಭಿಣಿ ಮಹಿಳೆಯರ ಮಾಹಿತಿ ಪಡೆಯಬೇಕು. ವಿಶೇಷವಾಗಿ 9 ತಿಂಗಳ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿಕಂದರ್ ಪಾಷಾ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಒಟ್ಟು 143 ಸ್ಕಾನಿಂಗ್ ಸೆಂಟರ್‌ಗಳಿವೆ. ಈ ಪೈಕಿ 109 ಸೆಂಟರ್‌ಗಳು ಮಂಗಳೂರು ತಾಲೂಕಿನಲ್ಲಿವೆ ಎಂದರು. ಸ್ಕಾನಿಂಗ್ ಸೆಂಟರ್‌ಗಳ ತಪಾಸಣೆಗೆ ಜಿಲ್ಲೆಯಲ್ಲಿ 13 ತಂಡಗಳನ್ನು ರಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಲೇಡಿಗೋಷನ್ ಅಧೀಕ್ಷಕಿ ಡಾ.ಸರೋಜಾ, ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News