ಮಾನಹಾನಿ ಹಾಗೂ ರಾಜದ್ರೋಹ ಕಾಯ್ದೆ ತಿದ್ದುಪಡಿ ಅಗತ್ಯ: ಎಂ.ಎಸ್.ಮಣಿ

Update: 2016-07-19 14:01 GMT

ಸುಳ್ಯ, ಜು.19: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಣಿ ಕಾರ್ಯಕ್ರಮ ಉದ್ಘಾಟಿಸಿದರು.

ಮಾಧ್ಯಮಗಳು ವಿರೋಧ ಪಕ್ಷಗಳಂತೆ ಲೋಪಗಳನ್ನೇ ಹೆಚ್ಚು ವೈಭವೀಕರಿಸುತ್ತಿವೆ. ತುರ್ತು ಪರಿಸ್ಥಿತಿ, ಬೋಪೋರ್ಸ್ ಹಗರಣ ಸೇರಿದಂತೆ ಸರಕಾರಗಳ ಲೋಪದೋಷಗಳನ್ನು ಅನಾವರಣ ಮಾಡಿದ್ದರಿಂದ ಪ್ರಜಾಪ್ರಭುತ್ವದ ಉಳಿವಿಗೆ ಕಾರಣವಾಗಿವೆ. ಕಾನೂನು ನಿಯಂತ್ರಣ ಮಾಡುವವರ ವಿರುದ್ಧ ಸಾರ್ವತ್ರಿಕ ಅಭಿಪ್ರಾಯ ರೂಪಿಸುವುದು ಮತ್ತು ಅದನ್ನು ನಿಯಂತ್ರಿಸುವ ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಲು ಆಡಳಿತರಲ್ಲಿರುವವರು ಮಾನಹಾನಿ ಕಾಯ್ದೆ ಹಾಗೂ ರಾಜದ್ರೋಹ ಕಾಯ್ದೆ ಬಳಕೆ ಮಾಡುತ್ತಿದ್ದಾರೆ. ಹಾಗಾಗಿ ಪತ್ರಕರ್ತರು ಐಪಿಸಿ 499 ಹಾಗೂ 500 ಮತ್ತು 124 ಹಾಗೂ 124ಎ ಕಾಯ್ದೆಯನ್ನು ತಿದ್ದುಪಡಿಗೆ ಒತ್ತಾಯ ಮಾಡಬೇಕಾಗಿದೆ ಎಂದರು. ಸಮಾಜದಲ್ಲಿ ಬಡತನದೊಂದಿಗೆ ಜಾತೀಯತೆಯೂ ಇಂದು ತೀವ್ರವಾಗಿದೆ. ವರದಿಗಳನ್ನು ಮಾಡುವಾಗ ಸೂಕ್ಷ್ಮವಾಗಿ ಗಮನಿಸಬೇಕು. ಎಷ್ಟು ಸಮಾಜಕ್ಕೆ ನೀಡಬೇಕು, ಯಾವುದಕ್ಕೆ ಕತ್ತರಿ ಹಾಕಬೇಕು ಎಂದು ಗಂಭೀರವಾಗಿ ಚಿಂತಿಸಬೇಕು ಎಂದವರು ಹೇಳಿದರು.

ಜನಪರವಾಗಿರುವ ಪತ್ರಿಕೆಗಳು ಮತ್ತು ಪತ್ರಕರ್ತರು ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ಉಪನ್ಯಾಸ ನೀಡಿದ ಪುತ್ತೂರಿನ ಪತ್ರಕರ್ತ ಮೇಘ ಪಾಲೆತ್ತಾಡಿ ಹೇಳಿದರು. ಮಾಧ್ಯಮಗಳು ಇಂದು ಉದ್ಯಮಗಳಾಗಿವೆ. ಪತ್ರಕರ್ತರನ್ನು ಸಮಾಜ ಕನ್ನಡಿಯಾಗಿರಬೇಕು ಹೊರತು ಒಡೆದ ಕನ್ನಡಿಯಾಗಬಾರದು. ಕೇವಲ ಪತ್ರಿಕೋದ್ಯಮ ಪದವಿ ಪಡೆದರೆ ಸಾಲದು ಸಂವೇದನಾಶಿಲತೆಯೂ ಪತ್ರಕರ್ತರಿಗೆ ಇರಬೇಕು ಎಂದವರು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಮಾತನಾಡಿ, ಪತ್ರಕರ್ತರಿಗೆ ಒತ್ತಡದಲ್ಲಿ ಕೆಲಸ ಮಾಡುವ ಅನಿವಾರ್ಯತೆ ಇದ್ದರೂ ಸತ್ಯಾಸತ್ಯತೆಯನ್ನು ಪರಿಶೀಲಿಸಿಯೇ ಕೆಲಸ ಮಾಡಬೇಕು ಎಂದರು.

ಹಿರಿಯ ಪತ್ರಿಕಾ ವಿತರಕ ಅರಂತೋಡಿನ ಎಂ.ಪಿ.ಸುಮಿತ್ರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ  ವರದಿಗಾರ ಮೇಘ ಪಾಲೆತ್ತಾಡಿ ವಿಶೇಷ ಉಪನ್ಯಾಸ ನೀಡಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಲಯನ್ಸ್ ಕ್ಲಬ್ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಅತಿಥಿಗಳಾಗಿದ್ದರು. ಸಂಘದ ಕಾರ್ಯದರ್ಶಿ ಲೋಕೇಶ್ ಗುಡ್ಡೆಮನೆ, ಗೌರವಾಧ್ಯಕ್ಷ ಗಿರೀಶ್ ಅಡ್ಪಂಗಾಯ ವೇದಿಕೆಯಲ್ಲಿದ್ದರು. ರಾಜ್ಯ ಸಂಘದ ಸದಸ್ಯ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಪ್ರಕಾಶ್ ಕುಕ್ಕೇಟಿ ಸ್ವಾಗತಿಸಿ, ಗಣೇಶ್ ಕುಕ್ಕುತಡಿ ವಂದಿಸಿದರು. ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News