ಕಲ್ಲಡ್ಕ: ಆಟೊ ನಿಲ್ದಾಣಕ್ಕೆ ಕಿಡಿಗೇಡಿಗಳಿಂದ ಸೋಡಾ ಬಾಟ್ಲಿ ಎಸೆತ

Update: 2016-07-19 17:43 GMT

ಬಂಟ್ವಾಳ, ಜು.19: ಇಲ್ಲಿನ ಕಲ್ಲಡ್ಕ ಆಟೊ ರಿಕ್ಷಾ ನಿಲ್ದಾಣಕ್ಕೆ ಯಾರೊ ಕಿಡಿಗೇಡಿಗಳು ಸೋಡಾ ಬಾಟ್ಲಿಯೊಂದನ್ನು ಎಸೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣೆ ಪೊಲೀಸರು ಅಂಗಡಿ, ಹೊಟೇಲ್ ಗಳನ್ನು ಮುಚ್ಚಿಸಿ ಜನರನ್ನು ಚದುರಿಸಿದ ಘಟನೆ ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ರಾತ್ರಿ 8 ಗಂಟೆ ಸುಮಾರಿಗೆ ಎಲ್ಲಿಂದಲೋ ತೂರಿ ಬಂದ ಸೋಡಾ ಬಾಟ್ಲಿಯೊಂದು ಕಲ್ಲಡ್ಕದ ಆಟೊ ನಿಲ್ದಾಣದ ಬಳಿ ಬಂದು ಬಿದ್ದಿದ್ದು ಈ ಸಂದರ್ಭದಲ್ಲಿ ಸ್ಥಳದಲ್ಲೆ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆ ಬಳಿಕ ಪರಿಸ್ಥಿತಿ ತಿಳಿಗೊಂಡು ಜನ ಜೀವನ ಎಂದಿನಂತಿತ್ತು. ಯಾರೋ ಕಿಡಿಗೇಡಿಗಳು ಪರಿಸರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಸೋಡಾ ಬಾಟ್ಲಿ ಎಸೆದಿರಬೇಕೆಂದು ಶಂಕಿಸಲಾಗಿದೆ.

ಆದರೆ, ರಾತ್ರಿ 9 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಅಂಗಡಿ, ಹೋಟೆಲ್ಗಳನ್ನು ಮುಚ್ಚಿಸಿ ಜನರನ್ನು ಚದುರಿಸಿದರು. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಕಲ್ಲಡ್ಕದ ಆಯಾ ಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಸೋಡಾ ಬಾಟ್ಲಿ ತೂರಿ ಬಂದ ಬಳಿಕ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾದ ಕಲ್ಲಡ್ಕದಲ್ಲಿ ಬಳಿಕ ಶಾಂತಿ ಮನೆಮಾಡಿತ್ತಾದರೂ ಸ್ಥಳಕ್ಕೆ ಬಂದ ಪೊಲೀಸರು ಏಕಾಏಕಿ ಅಂಗಡಿ, ಹೊಟೇಲ್ಗಳನ್ನು ಮುಚ್ಚಿಸಿದ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಅಹಿತಕರ ಘಟನೆಯ ಬಳಿಕ ದಿಢೀರ್ ಬಂದ ಪೊಲೀಸರು ಹೊಟೇಲ್, ಫಾಸ್ಟ್ಫುಡ್ ಅಂಗಡಿಗಳನ್ನು ಮುಚ್ಚಿಸಿದ್ದರಿಂದ ತಯಾರಿಸಿಟ್ಟಿದ್ದ ಆಹಾರಗಳು ಬಾಕಿಯಾಗಿದ್ದು ನಷ್ಟ ಸಂಭವಿಸಿದೆ ಎಂದು ಹೋಟೆಲ್ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News