ತಸ್ಲೀಮ್ ಕೊಲೆ ಪ್ರಕರಣ: ಏಳು ಮಂದಿಯ ಸೆರೆ

Update: 2016-07-19 18:17 GMT

ಹಿರಿಯಡ್ಕ, ಜು.19: ಕೆಮ್ಮಣ್ಣುವಿನ ಶೇಖ್ ಮುಹಮ್ಮದ್ ತಸ್ಲೀಮ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹಿರಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ.
 ಆತ್ರಾಡಿಯ ಸೈಫು ಯಾನೆ ಸೈಫುದ್ದೀನ್ ಹಾಗೂ ಮುಹಮ್ಮದ್ ಹನೀಫ್, ಕೊಪ್ಪದ ದಿವಾಕರ ಕುಂಬಾರ್, ಸಂತೋಷ್ ಯಾನೆ ಕುರ್ಪು ಸಂತೋಷ್, ಚಿಕ್ಕಮಗಳೂರಿನ ಇಮ್ತಿಯಾಝ್, ಕುದಿ ಗ್ರಾಮದ ದಿವಾಕರ ಆಚಾರಿ ಹಾಗೂ ಶಂಕರ ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಎರಡು ತಲವಾರು (ಮಚ್ಚು), ಒಂದು ಆಟಿಕೆಯ ಪಿಸ್ತೂಲ್‌ನ್ನು ವಶಪಡಿಸಿಕೊಳ್ಳಲಾಗಿದೆ. 
ಆರೋಪಿಗಳು ತಸ್ಲೀಮ್‌ನನ್ನು ವ್ಯವಹಾರದ ವಿಚಾರಕ್ಕೆ ಸಂಬಂಧಿಸಿ ಆತ್ರಾಡಿ ಸಮೀಪದ ಶೇಡಿಗುಡ್ಡೆ ಎಂಬಲ್ಲಿ ಜು.14ರಂದು ಕೊಲೆಗೈದು ಆತನ ಕಾರು ಸಹಿತ ಮೃತದೇಹವನ್ನು ಎಸೆದು ಹೋಗಿದ್ದರು. ಪ್ರಕರಣದ ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಲಾಗಿತ್ತು. ಅದರಂತೆ ಸೈಫುದ್ದೀನ್, ದಿವಾಕರ ಕುಂಬಾರ್, ಇಮ್ತಿಯಾಝ್‌ನನ್ನು ಸೋಮವಾರ ಹಾಗೂ ಸಂತೋಷ್, ದಿವಾಕರ ಆಚಾರಿ, ಶಂಕರ, ಹನೀಫ್‌ನನ್ನು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳ ಪೈಕಿ ದಿವಾಕರ್ ಆಚಾರಿ ಹಾಗೂ ಸಂತೋಷ್‌ರನ್ನು ಪೊಲೀಸ್ ಕಸ್ಟಡಿಗೆ ಮತ್ತು ಉಳಿದ ಐವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
 ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ನೇತೃತ್ವದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಹಿರಿಯಡ್ಕ ಠಾಣಾಧಿಕಾರಿ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿ ಸುದೇಶ್ ಶೆಟ್ಟಿ, ಸುಧಾಕರ, ಶಶಿಕುಮಾರ್, ಸಂತೋಷ್, ಮೋಹನ ಕೋತ್ವಾಲ್, ರಾಜೇಶ್ ಕೊಕ್ಕರ್ಣೆ, ಅಶೋಕ್, ರಾಜೇಶ್, ಅಬ್ದ್ದುಲ್ ನಝೀರ್, ಅರುಣ್ ಕುಮಾರ್, ನಾಗೇಂದ್ರ, ಫಣಿರಾಜ್, ಪ್ರಸಾದ್, ಗೋಪಾಲ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News