ಮತ್ತೆ ಮೈದುಂಬಿ ಹರಿಯುತ್ತಿದೆ ‘ವಳಚ್ಚಿಲ್ ಫಾಲ್ಸ್’

Update: 2016-07-20 05:00 GMT

ಬಂಟ್ವಾಳ, ಜು.19: ‘ಜಲಪಾತ’ ಎಂದಾಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಜನರ ನೆನಪಿಗೆ ಬರುವುದೇ ದೂರದ ಶಿವಮೊಗ್ಗದ ಜೋಗ, ಕೊಡಗಿನ ಅಬ್ಬಿ ಜಲಪಾತಗಳು. ಇವುಗಳ ವೀಕ್ಷಣೆಗೆಂದು ಸಾವಿರಾರು ರೂ. ಖರ್ಚು ಮಾಡಿ ಜಿಲ್ಲೆಯಿಂದ ತೆರಳುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯೇನಲ್ಲ. ಆದರೆ, ಮಂಗಳೂರು ತಾಲೂಕಿನ ಫರಂಗಿಪೇಟೆ ಸಮೀಪದ ವಳಚ್ಚಿಲ್ ಎಂಬಲ್ಲಿರುವ ಜಲಪಾತದ ಕುರಿತು ಜಿಲ್ಲೆಯ ಹೆಚ್ಚಿನವರಿಗೆ ಗೊತ್ತೇ ಇಲ್ಲ.

ಮಳೆಗಾಲದಲ್ಲಿ ಮೈದುಂಬಿ ಧುಮುಕುವ ‘ವಳಚ್ಚಿಲ್ ಜಲಪಾತ’ಕ್ಕೆ ಇದೀಗ ಮತ್ತೆ ಕಳೆ ಬಂದಿದೆ. ಇಲ್ಲಿನ ಹಚ್ಚ ಹಸಿರು ಪರಿಸರದ ನಡುವೆ ಎತ್ತರದಿಂದ ಧುಮುಕಿ ಬಂಡೆ ಕಲ್ಲುಗಳ ನಡುವೆ ನರ್ತಿಸುತ್ತಾ ಹರಿಯುವ ನೀರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿ ಎರಡು ಜಲಪಾತಗಳಿದ್ದು, ಒಂದು ವಳಚ್ಚಿಲ್ ಪದವು ಗುಡ್ಡದ ಮಧ್ಯ ಭಾಗದಲ್ಲಿದ್ದರೆ ಇನ್ನೊಂದು ಗುಡ್ಡದ ತಪ್ಪಲಿನಲ್ಲಿದೆ. ಗುಡ್ಡದ ತುತ್ತ ತುದಿಯಲ್ಲಿ ಹುಟ್ಟಿ ಹರಿಯುವ ಝರಿಗಳು ಈ ಜಲಪಾತವನ್ನು ಸೃಷ್ಟಿಸಿವೆ. ಗುಡ್ಡದ ಮಧ್ಯಭಾಗದಲ್ಲಿರುವ ಜಲಪಾತದಿಂದ ಧುಮುಕಿ ಹರಿದು ಬರುವ ನೀರು ಗುಡ್ಡದ ತಪ್ಪಲಿನಲ್ಲಿ ಜಲಪಾತವನ್ನು ಸೃಷ್ಟಿಸಿದೆ.

ಹೆಚ್ಚಿನ ಜಲಪಾತಗಳು ಪ್ರಪಾತನ್ನು ಹೊಂದಿ ಹಾಗೂ ರಭಸದಿಂದ ಹರಿಯುವ ಕಾರಣ ಪ್ರವಾಸಿಗರ ಪಾಲಿಗೆ ಅಪಾಯಕಾರಿಯಾಗಿರುತ್ತದೆ. ಆದರೆ ‘ವಳಚ್ಚಿಲ್ ಜಲಪಾತ’ದಲ್ಲಿ ಪ್ರಪಾತಗಳಿಲ್ಲ. ಜಲಪಾತದಿಂದ ಧುಮುಕಿದ ನೀರು ರಭಸದಿಂದ ಹರಿಯದೆ ಬಂಡೆಕಲ್ಲುಗಳ ನಡುವೆ ಸರಾಗವಾಗಿ ಹರಿಯುತ್ತದೆ. ಆದ್ದರಿಂದ ‘ವಳಚ್ಚಿಲ್ ಜಲಪಾತ’ ಪ್ರವಾಸಿ ಪ್ರಿಯ ತಾಣವೆನಿಸಿದೆ. ಆದರೆ ಇಲ್ಲಿನ ಕೆಲವೊಂದು ಬಂಡೆಕಲ್ಲುಗಳು ಪಾಚಿ ಹಿಡಿದು ಜಾರುತ್ತಿರುವುದರಿಂದ ಎಚ್ಚರದಿಂದಿರುವುದು ಅಗತ್ಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 75ರ ವಳಚ್ಚಿಲ್ ದರ್ಗಾದ ಬಳಿಯ ಬಸ್ ನಿಲ್ದಾಣದ ಎಡಕ್ಕಿರುವ ವಳಚ್ಚಿಲ್ ಪದವಿಗೆ ಹೋಗುವ ರಸ್ತೆಯಲ್ಲಿರುವ ರೈಲು ಹಳಿ ದಾಟಿದ ತಕ್ಷಣ ಎಡಕ್ಕೆ ಇರುವ ಕಾಲು ದಾರಿಯೇ ಗುಡ್ಡದ ತಪ್ಪಲಿನಲ್ಲಿರುವ ಜಲಪಾತಕ್ಕಿರುವ ದಾರಿ. ಇದು ಕಾಲು ದಾರಿಯಾಗಿರುವುದರಿಂದ ಸ್ವಂತ ವಾಹನಗಳಲ್ಲಿ ಬಂದವರು ಇಲ್ಲಿ ವಾಹನಗಳನ್ನು ನಿಲ್ಲಿಸಿ ನಡೆದುಕೊಂಡೇ ಹೋಗಬೇಕಾಗಿದೆ. ಸುಮಾರು 100 ಮೀಟರ್‌ನಷ್ಟು ಕಾಲು ದಾರಿಯಲ್ಲಿ ಸಾಗಿದಾಗ ಎದುರಾಗುವ ರೈಲು ಹಳಿಯಲ್ಲೂ 100 ಮೀಟರ್‌ನಷ್ಟು ಸಾಗಬೇಕಿದೆ. ನಡೆಯುತ್ತಾ ಹೋದಂತೆ ಬಲಭಾಗದಲ್ಲಿ ನೀರು ಧುಮುಕುವ ಶಬ್ದ ಕೇಳಿ ಬರುತ್ತದೆ. ರೈಲು ಹಳಿಯಿಂದ ಬಲಭಾಗಕ್ಕೆ ಇಳಿದು ಒಂದಿಷ್ಟು ನಡೆದಾಗ ಜಲಪಾತ ಗೋಚರವಾಗುತ್ತದೆ. ವಳಚ್ಚಿಲ್ ಪದವಿಗೆ ಹೋಗಿ ಬಳಿಕ ಗುಡ್ಡದ ಕಡಿದಾದ ಕಾಲು ದಾರಿಯಿಂದ ಮಧ್ಯಭಾಗದಲ್ಲಿರುವ ಜಲಪಾತದೆಡೆಗೆ ಸಾಗಬೇಕಾಗಿದೆ. ಇಲ್ಲಿಯೂ ಎರಡು ಕಡೆಗಳಿಂದ ಎತ್ತರದಿಂದ ಬಂಡೆ ಕಲ್ಲಿನ ಮೇಲೆ ಬಿದ್ದು ಸುಂದರವಾಗಿ ಹರಿಯುವ ನೀರು ಪ್ರವಾಸಿಗರನ್ನು ಮೈಮರೆಸುತ್ತದೆ.

ಜಿಲ್ಲೆಯಲ್ಲೇ ಇರುವ ಅತ್ಯುತ್ತಮ ಪ್ರವಾಸಿ ತಾಣ ವೊಂದು ಮೂಲಭೂತ ಸೌಕರ್ಯಗಳು, ಮಾಹಿತಿಯ ಕೊರತೆಯಿಂದ ಕಡೆಗಣಿಸಲ್ಪಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ‘ವಳಚ್ಚಿಲ್ ಫಾಲ್ಸ್’ನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮುಂದಾಗಬೇಕಾಗಿದೆ.


‘ನಾವು ಹತ್ತಿರದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇವೆ. ವಾರದಲ್ಲಿ ಎರಡು ಮೂರು ಬಾರಿ ಇಲ್ಲಿಗೆ ಬರುತ್ತೇವೆ. ಹೊರ ಜಿಲ್ಲೆಯ ಜಲಪಾತಕ್ಕಿಂತ ಇಲ್ಲಿ ಖುಷಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟವರು ಹಾಸನ ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳು.


‘ಗೆಳೆಯರು ಒಟ್ಟು ಸೇರಿ 2 ವರ್ಷಗಳಿಂದ ಈ ಜಲಪಾತಕ್ಕೆ ಬರುತ್ತಿದ್ದೇವೆ. ಇತರ ಜಲಪಾತಗಳಂತೆ ಇಲ್ಲೂ ಸ್ನಾನ ಮಾಡಲು ಖುಷಿಯಾಗುತ್ತದೆ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದು, ಈ ತಾಣವನ್ನು ಅಭಿವೃದ್ಧಿಪಡಿಸಿದರೆ ಇದೊಂದು ಉತ್ತಮ ಪ್ರವಾಸಿ ತಾಣವಾಗಬಹುದು’ ಎಂದು ಹೇಳುತ್ತಾರೆ ಗೆಳೆಯರೊಂದಿಗೆ ಜಲಪಾತ ವೀಕ್ಷಣೆಗೆ ಬಂದ ಉಳ್ಳಾಲದ ಮಾರ್ಗತಲೆ ನಿವಾಸಿ ಮರ್ಝೂಕ್ ಹಸೈನ್.

‘ಮೂಲಭೂತ ಸೌಕರ್ಯಗಳಿಲ್ಲ’


‘ವಳಚ್ಚಿಲ್ ಫಾಲ್ಸ್’ ಮೂರು, ನಾಲ್ಕು ವರ್ಷಗಳಿಂದ ಪ್ರಚಾರದಲ್ಲಿದ್ದರೂ ಜಿಲ್ಲೆಯ ಹೆಚ್ಚಿನವರಿಗೆ ಇನ್ನೂ ಇದರ ಕುರಿತು ತಿಳಿದಿಲ್ಲ. ಇಲ್ಲಿಗೆ ಶಾಲೆ-ಕಾಲೇ ಜಿನ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲಿನ ಎರಡೂ ಫಾಲ್ಸ್‌ಗೆ ಹೋಗುವ ದಾರಿಯೂ ಸರಿಯಿಲ್ಲದಿರುವುದು ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹೆಚ್ಚಿನವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಪಂ ಅಥವಾ ಜಿಪಂ ಈ ಎರಡೂ ಜಲಪಾತಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿದರೆ ಇನ್ನಷ್ಟು ಪ್ರವಾಸಿ ಗರನ್ನು ಆಕರ್ಷಿಸಬಹುದು’’. - ಉಬೈದುಲ್ಲ, ವಳಚ್ಚಿಲ್ ಗ್ರಾಪಂ ಸದಸ್ಯ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News