ಸಾಮಾಜಿಕ ಬದಲಾವಣೆಗಾಗಿ ಮೀಸಲಾತಿ ಅತ್ಯಗತ್ಯ: ಸಚಿವ ರೈ

Update: 2016-07-21 11:28 GMT

ಪುತ್ತೂರು, ಜು.21: ಮೀಸಲಾತಿ ಕಾರಣದಿಂದ ಗ್ರಾಮೀಣ ಪ್ರದೇಶದ ಹೆಣ್ಣುಮಗಳಾದ ಮೀನಾಕ್ಷಿ ಶಾಂತಿಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಲು ಅನುಕೂಲವಾಯಿತು. ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕಿದೆ. ಮರ್ಯಾದೆಯ ಬದುಕು ನಮ್ಮದಾಗಬೇಕು. ಊಳಿಗಕ್ಕೆ ದುಡಿಯುತ್ತಿದ್ದ ದಿನವಿತ್ತು. ಇದನ್ನೆಲ್ಲಾ ದಾಟಿ ಬಂದು ಸುಂದರ ಸಮಾಜ ನಿರ್ಮಾಣ ಮಾಡಲಾಗಿದೆ. ಇದೆಲ್ಲಾ ಮೀಸಲಾತಿಯಿಂದ ಸಾಧ್ಯವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು ಗುರುವಾರ ಪುತ್ತೂರು ಪುರಭವನದಲ್ಲಿ ನಡೆದ ಜನಸಂಪರ್ಕ ಸಭೆ ಹಾಗೂ 100 ಬಾಪೂಜಿ ಕೇಂದ್ರಗಳನ್ನು ಉದ್ಘಾಟಿಸಿ ಮತನಾಡಿದರು.

ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ಶ್ರಮಿಸುತ್ತಿದೆ. ಈಗಾಗಲೇ ಶೇ.85ರಷ್ಟು ಭರವಸೆಯನ್ನು ಈಡೇರಿಸಿದ್ದೇವೆ. ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲೇ ಜನರಿಗೆ ಸೌಕರ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಬಾಪೂಜಿ ಸೇವಾ ಕೇಂದ್ರ ತೆರೆಯಲಾಗಿದೆ. ಸಾಮಾಜಿಕ ನ್ಯಾಯದಿಂದ ಏರುಪೇರಾದ ದುರ್ಬಲರಿಗೆ ಇದರಿಂದ ಪ್ರಯೋಜನವಾಗಲಿದೆ. ಜನಸಂಪರ್ಕ ಸಬೆಯನ್ನು ಪುತ್ತೂರಿನಿಂದ ಆರಂಭಿಸುತ್ತಿದ್ದೇವೆ. ಪ್ರತಿ ಗುರುವಾರ ತಾಲೂಕು ಮಟ್ಟದಲ್ಲಿ ಹಾಗೂ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದಲ್ಲಿ ಸಬೆ ನಡೆಸಲಾಗುವುದು ಎಂದರು.

ಊಳಿಗದ ಬದುಕನ್ನು ದೂರಮಾಡಿ, ದೇವರಾಜು ಅರಸು ಆಡಳಿತದಲ್ಲಿ ಭೂ ಮಸೂದೆ ಜಾರಿಗೆ ತರಲಾಯಿತು. ಇದರಿಂದಾಗಿ ಗ್ರಾಮದಲ್ಲಿ 10 ಪಟ್ಟಾಧಾರರಿದ್ದ ಸಂಖ್ಯೆ ಇದೀಗ, 3, 4 ಸಾವಿರಕ್ಕೆ ತಲುಪಿದೆ. ಅತಿಹೆಚ್ಚು ಭೂ ಮಸೂದೆ ಜಾರಿಯಾದದ್ದು ಕರ್ನಾಟಕದಲ್ಲಿ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ಸೌಲಭ್ಯಗಳನ್ನು ಅತಿಹೆಚ್ಚು ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ. ಹಿಂದುಳಿದ ವರ್ಗದ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮೀನು ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 94ಸಿ ಅಡಿ 56 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲಿ 10 ಸಾವಿರ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಮಾಹಿತಿ ಕೊರತೆ ಇದೆ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಕೆ ದಿನವನ್ನು ಅಕ್ಟೋಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ. 94ಸಿಸಿ ಗೂ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ವಿವರಿಸಿದರು.

ಕಂದಾಯ ಅದಾಲತ್, ಪೋಡಿ ಅದಾಲತ್, ಬಗರ್ ಹುಕುಂ, ಭೂ ಮಸೂದೆ, 94ಸಿ ಮೊದಲಾದ ಯೋಜನೆ ಜಾರಿಗೊಳಿಸಲಾಗಿದೆ. ಹಲವು ನಿಗಮಗಳ ಸಾಲ ಮನ್ನಾ ಮಾಡಲಾಗಿದೆ. ಶಾಲೆ ಹಾಗೂ ಅಂಗನವಾಡಿಯ 1,78,000 ಮಂದಿಗೆ ಕ್ಷೀರಭಾಗ್ಯ, ಸಮಗ್ರ ಬಾಲವಿಕಾಸ ಯೋಜನೆ ತರಲಾಗಿದೆ. 3 ಸಾವಿರ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.

ಕೊಲದಲ್ಲಿ ಪಶುವೈದ್ಯಕೀಯ ಕಾಲೇಜನ್ನು ಸ್ಥಳಾಂತರಿಸಲಾಗಿದೆ ಎಂಬ ಗುಲ್ಲೆದ್ದಿತ್ತು. ಅಧಿಕಾರಿಗಳು ಕಾಲೇಜು ಸ್ಥಳಾಂತರಕ್ಕೆ ದಾಖಲೆ ಸಿದ್ಧಪಡಿಸಿದ್ದರು. ಆದರೆ ಇದನ್ನು ಟಿ.ಬಿ.ಜಯಚಂದ್ರ ಸಚಿವರಾಗಿದ್ದಾಗಲೇ ತಿರಸ್ಕರಿಸಲಾಗಿದೆ. ಕೊಲದಲ್ಲೇ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿದೆ ಎಂದು ರಮಾನಾಥ ರೈ ಹೇಳಿದರು.

ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್, ಸಹಾಯಕ ಆಯುಕ್ತ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪತಹಶೀಲ್ದಾರ್ ಶ್ರೀಧರ್ ಪ್ರಾರ್ಥಿಸಿದರು. ಪ್ರೊ.ಬಿ.ಜೆ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಜನಸಂಪರ್ಕ ಸಭೆ ನಡೆಯುತ್ತಿದ್ದ ವೇದಿಕೆ ಗೊಂದಲದ ಗೂಡಾಗಿತ್ತು. ಮನವಿ ನೀಡುವವರ ಅರ್ಜಿಯನ್ನು ಮೊದಲೇ ತೆಗೆದುಕೊಳ್ಳಲಾಗಿತ್ತು. ಕಾರ್ಯಕ್ರಮ ನಿರೂಪಕರು ಒಬ್ಬೊಬ್ಬರ ಹೆಸರನ್ನು ಕೂಗುತ್ತಿದ್ದಂತೆ, ನೇರವಾಗಿ ವೇದಿಕೆ ಮೇಲೇರಿ ಬಂದರು. ಇದೇ ಸಂದರ್ಭ ಸಂಬಂಧಪಟ್ಟ ಅಧಿಕಾರಿಯ ಬಳಿ ವಿವರಣೆ ಕೇಳಲಾಯಿತು. ಇದರಿಂದ ಸಭೆಗೆ ಮಾಹಿತಿ ದೊರಕದಂತಾಯಿತು. ಒಂದು ಹಂತದಲ್ಲಿ ವೇದಿಕೆ ತುಂಬಾ ಜನರು ನುಗ್ಗಿ ಬರುವಂತಾಯಿತು. ಸ್ವಲ್ಪ ಸಮಯದ ಬಳಿಕ ಸಾವರಿಸಿಕೊಂಡ ಅಧಿಕಾರಿಗಳು, ಸಾರ್ವಜನಿಕರಿಗೆ ಮೈಕ್‌ನ ವ್ಯವಸ್ಥೆ ಮಾಡಿ, ವೇದಿಕೆ ಕೆಳಭಾಗದಲ್ಲಿ ನಿಂತು ಸಮಸ್ಯೆ ಹೇಳಿಕೊಳ್ಳುವಂತೆ ಸೂಚಿಸಿದರು. ಸಂಬಂಧಪಟ್ಟ ಅಧಿಕಾರಿ ಇದಕ್ಕೆ ವಿವರಣೆ ನೀಡುವಂತೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News