ಉಪ್ಪಿನಂಗಡಿ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲೆ ಬಂದ್ ಮಾಡಿದ ಪೋಷಕರು

Update: 2016-07-21 13:07 GMT

ಉಪ್ಪಿನಂಗಡಿ, ಜು.21: ಹಿರೇಬಂಡಾಡಿಯ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಶಿಕ್ಷಣ ಇಲಾಖೆ ವರ್ಗಾವಣೆಗೊಳಿಸಿರುವುದರ ವಿರುದ್ಧ ಗುರುವಾರ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ತಮ್ಮ ಆಕ್ರೋಶ ಹೊರಗೆಡವಿದ್ದಾರೆ.

ಇಂದು ಶಾಲೆಗೆ ಏಳನೆ ತರಗತಿಯ ಓರ್ವ ವಿದ್ಯಾರ್ಥಿ ಹಾಜರಾಗಿದ್ದ. ಮಧ್ಯಾಹ್ನದವರೆಗೆ ಶಾಲೆಯಲ್ಲಿದ್ದ ಈತ ಬಳಿಕ ಮನೆಗೆ ತೆರಳಿದ್ದಾನೆ. ಇಲ್ಲಿನ ಅಡ್ಯಾಳ ಎಂಬಲ್ಲಿ 1902ರಲ್ಲಿ ಈ ಸರಕಾರಿ ಶಾಲೆ ಸ್ಥಾಪನೆಯಾಗಿದ್ದು, 1935ರಲ್ಲಿ ಈ ಶಾಲೆಯನ್ನು ಈಗ ಇರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಲ್ಲಿದ್ದ ಕನ್ನಡ ಹಾಗೂ ವಿಜ್ಞಾನ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬೇರೆ ಕಡೆ ವರ್ಗಾಯಿಸಿತ್ತು. ಇದನ್ನು ವಿರೋಧಿಸಿ ಬುಧವಾರ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದ ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಆರೋಪಿಸಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ- ಉಪಾಧ್ಯಕ್ಷರಾದಿಯಾಗಿ ಸದಸ್ಯರೆಲ್ಲಾ ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದರು ಹಾಗೂ ಮೂರು ದಿನಗಳ ಕಾಲ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೆ ಶಿಕ್ಷಣ ಇಲಾಖೆಯಿಂದ ಯಾವ ಸ್ಪಂದನೆ ವ್ಯಕ್ತವಾಗುತ್ತದೆ ಎಂದು ಕಾದು ನೋಡುತ್ತೇವೆ. ಬಳಿಕವೂ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೈಬಿಡದಿದ್ದಲ್ಲಿ ಅಥವಾ ಇಲ್ಲಿ ಖಾಲಿಯಾಗಿರುವ ವಿಜ್ಞಾನ ಹಾಗೂ ಕನ್ನಡ ಶಿಕ್ಷಕರನ್ನು ಭರ್ತಿಗೊಳಿಸದಿದ್ದಲ್ಲಿ ನಮ್ಮ ಮಕ್ಕಳ ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಪೋಷಕರೆಲ್ಲಾ ಒಮ್ಮತದ ನಿರ್ಧಾರ ತೆಗೆದುಕೊಂಡು ಮನೆಗೆ ತೆರಳಿದ್ದರು.

ಅದರಂತೆ 1ರಿಂದ ಏಳನೆ ತರಗತಿಯಲ್ಲಿರುವ 249 ವಿದ್ಯಾರ್ಥಿಗಳಲ್ಲಿ ಗುರುವಾರ ಓರ್ವ ವಿದ್ಯಾರ್ಥಿಯನ್ನು ಬಿಟ್ಟರೆ ಉಳಿದೆಲ್ಲಾ ಮಕ್ಕಳು ಗೈರು ಹಾಜರಾಗಿದ್ದಾರೆ. ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು ಮಾತ್ರ ಸಂಜೆಯವರೆಗೆ ಶಾಲೆಯಲ್ಲಿದ್ದು, ಸಂಜೆ ಶಾಲಾ ಕರ್ತವ್ಯದ ಅವಧಿ ಮುಗಿದ ಬಳಿಕ ಮನೆಗೆ ತೆರಳಿದ್ದಾರೆ.

ಹಿರೇಬಂಡಾಡಿಯ ಸರಕಾರಿ ಶಾಲೆಯ ದಾಖಲಾತಿ ಹೀಗಿದೆ

ಇಲ್ಲಿ 2012-13ನೆ ಶೈಕ್ಷಣಿಕ ಸಾಲಿನಲ್ಲಿ 1ರಿಂದ ಏಳನೆ ತರಗತಿಯವರೆಗೆ ಈ ಶಾಲೆಗೆ 47 ವಿದ್ಯಾರ್ಥಿಗಳು ದಾಖಲಾಗಿದ್ದರೆ, 2013-14ನೆ ಸಾಲಿನಲ್ಲಿ 33, 2014-15ನೇ ಸಾಲಿನಲ್ಲಿ 42, 2015-16ನೇ ಸಾಲಿನಲ್ಲಿ 40 ವಿದ್ಯಾರ್ಥಿಗಳು ಹಾಗೂ 2016-17ನೆ ಶೈಕ್ಷಣಿಕ ಸಾಲಿನಲ್ಲಿ 46 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಶೈಕ್ಷಣಿಕವಾಗಿಯೂ ಈ ಶಾಲೆಗೆ ಉತ್ತಮ ಹೆಸರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News