ಕೌನ್ಸೆಲಿಂಗ್‌ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಡಿಲಿಸಲು ಚಿಂತನೆ: ಸಚಿವ ರಮಾನಾಥ ರೈ

Update: 2016-07-21 13:36 GMT

ಪುತ್ತೂರು, ಜು.21: 35ರ ಬದಲು 25 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕ -ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲು ನಡೆಸುತ್ತಿರುವ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 35ರಿಂದ 25ಕ್ಕೆ ಪರಿಗಣಿಸಲು ಚಿಂತನೆ ನಡೆಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಮಲೆನಾಡು ಪ್ರದೇಶದ ಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಪುತ್ತೂರು ಪುರಭವನದಲ್ಲಿ ಗುರುವಾರ ನಡೆದ ಜನಸಂಪರ್ಕ ಸಭೆಯಲ್ಲಿ ಇಡ್ಯೊಟ್ಟು ಶಾಲಾ ಎಸ್‌ಡಿಎಂಸಿ ಮನವಿಗೆ ಉತ್ತರಿಸಿದರು.

ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಗೊಂದಲ ಸೃಷ್ಟಿಯಾಗಿದೆ. ಈಗಾಗಲೇ 35 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಂತೆ ಲೆಕ್ಕಾಚಾರ ಹಾಕಿ, ಕೌನ್ಸೆಲಿಂಗ್ ನಡೆಸಲಾಗಿದೆ. ಇದರಿಂದಾಗಿ ಶಾಲೆಗೆ ಶಿಕ್ಷಕರ ಕೊರತೆ ಆಗುವುದನ್ನು ಮನಗಂಡು ಸರಕಾರದ ಹಂತದಲ್ಲಿ ಮಾತುಕತೆ ನಡೆದಿದೆ. ಮಲೆನಾಡು ಪ್ರದೇಶದ ಶಾಲೆಗಳಿಗೆ ಇದರಿಂದ ರಿಯಾಯಿತಿ ನೀಡುವ ಬಗ್ಗೆ ಪ್ರಸ್ತಾವನೆ ನೀಡಲಾಗಿದೆ. 35 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕನನ್ನು ಗುರುತಿಸುವ ಬದಲು 25 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನನ್ನು ಗುರುತಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾದಲ್ಲಿ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಉತ್ತಮ ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಡಿಪಿಐ ವಾಲ್ಟರ್ ಡಿಮೆಲ್ಲೊ, ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್‌ನಲ್ಲಿ ಮಲೆನಾಡು ಪ್ರದೇಶದ ಶಾಲೆಗಳಿಗೆ ರಿಯಾಯಿತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಉತ್ತರಕನ್ನಡ, ಕೊಡಗು, ಶಿರಸಿ ಸೇರಿದಂತೆ ಮಲೆನಾಡು ಪ್ರದೇಶದ ಪಟ್ಟಿಗೆ ದಕ್ಷಿಣ ಕನ್ನಡ ಹಾಗೂ ಕೊಡಗನ್ನು ಪರಿಗಣಿಸಲಾಗಿದೆ. ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡಿದ್ದು, ಸರಕಾರ ಅನುಮೋದನೆ ನೀಡುವುದು ಮಾತ್ರ ಬಾಕಿ. ಇದು ಅಂತಿಮವಾದರೆ ಈಗಾಗಲೇ ನಡೆದಿರುವ ಕೌನ್ಸೆಲಿಂಗ್‌ನ್ನು ಪರಿಶೀಲನೆ ಮಾಡಬಹುದು. ಹೆಚ್ಚುವರಿ ಎಂದು ಗುರುತಿಸಿರುವ ಶಿಕ್ಷಕರ ಸಂಖ್ಯೆ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಇಡ್ಯೊಟ್ಟು ಕಿ.ಪ್ರಾ. ಶಾಲೆ ಕಳೆದ ಒಂಬತ್ತು ವರ್ಷಗಳಿಂದ ಉತ್ತಮ ಪ್ರಗತಿಯಲ್ಲಿದೆ. ಈಗ ಇರುವ ಶಿಕ್ಷಕರ ಕಾರ್ಯದಿಂದ ಶಾಲೆ ಅಭಿವೃದ್ಧಿ ಪಥದಲ್ಲಿದೆ. ಇದರ ನಡುವೆ ಶಾಲೆಯಲ್ಲಿ ಹೊಸ ಹುದ್ದೆ ಸೃಷ್ಟಿಸಿ, ಒಬ್ಬ ಶಿಕ್ಷಕರನ್ನು ನೀಡಲಾಗಿದೆ. ಆದ್ದರಿಂದ ಈಗಾಗಲೇ ಇದ್ದ ಇಬ್ಬರು ಶಿಕ್ಷಕರಲ್ಲಿ ಸೀನಿಯರಿಟಿ ಮೇಲೆ ಒಬ್ಬರು ಕೌನ್ಸೆಲಿಂಗ್‌ನಲ್ಲಿ ಗುರುತಿಸಲ್ಪಟ್ಟಿದ್ದಾರೆ. 22 ಇದ್ದ ಮಕ್ಕಳ ಸಂಖ್ಯೆ ಈ ಬಾರಿ 44ಕ್ಕೆ ಏರಿಕೆಯಾಗಿದೆ. ಈ ನಡುವೆ ಉತ್ತಮ ಶಿಕ್ಷಕರನ್ನು ತೆರವು ಮಾಡಿದರೆ ಶಾಲಾ ಅಭಿವೃದ್ಧಿ ಮತ್ತೆ ಕುಂಠಿತವಾಗುತ್ತದೆ. ಆದ್ದರಿಂದ ಶಿಕ್ಷಕರ ವರ್ಗಾವಣೆಯನ್ನು ನಾವು ಸಹಿಸುವುದಿಲ್ಲ. ಒಂದು ವೇಳೆ ವರ್ಗಾವಣೆ ಮಾಡಿದ್ದೇ ಆದಲ್ಲಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಜನಸಂಪರ್ಕ ಸಭೆಯಲ್ಲಿ ಇಡ್ಯೊಟ್ಟು ಎಸ್‌ಡಿಎಂಸಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ತಾಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಮುಖಂಡ ಬೂಡಿಯಾರ್ ಪುರುಷೋತ್ತಮ ರೈ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News