ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲೂ ಸಸ್ಯರಾಶಿಗಳ ಪಾತ್ರ ಮಹತ್ವದ್ದು:ಮಲ್ಲನಗೌಡ

Update: 2016-07-22 12:12 GMT

ಉಳ್ಳಾಲ, ಜು.22:ಎಂತಹುದೇ ಅಭಿವೃದ್ಧಿ ಕಾರ್ಯಗಳಲ್ಲೂ ಕೂಡ ಸಸ್ಯರಾಶಿಗಳ ಪಾತ್ರ ಮಹತ್ವದ್ದಾಗಿದ್ದು, ಇಂತಹ ಅಮೂಲ್ಯ ಸಸ್ಯಸಂಕುಲವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಜವಬ್ದಾರಿ ವಿದ್ಯಾರ್ಥಿ ಸಮೂಹದ್ದಾಗಿದೆ ಎಂದು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ವಕೀಲರ ಸಂಘ, ಅರಣ್ಯ ಇಲಾಖೆ, ಸಾರ್ವಜನಿಕ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಾರುವಿನಲ್ಲಿ ನಡೆದ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಿಡ ನೆಡುವ ಕಾರ್ಯಕ್ರಮಗಳಿಗೆ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು,ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವನಮಹೋತ್ಸವಗಳು ಕೇವಲ ಒಂದು ದಿನದ ಕಾಟಾಚಾರಕ್ಕೆ ಬಲಿಯಾಗುತ್ತಿರುವುದು ಖೇದಕರ. ಇಂದಿನ ಮಕ್ಕಳೇ ಗಿಡಗಳನ್ನು ನೆಟ್ಟು ಅದರ ಲಾಲನೆ, ಪಾಲನೆಯ ಜವಬ್ದಾರಿ ವಹಿಸಿಕೊಂಡು ಸಸ್ಯಕಾಶಿಯನ್ನು ಮುಂದಿನ ಪೀಳಿಗೆಗೂ ವಿಸ್ತರಿಸುವ ಮಹತ್ಕಾರ್ಯ ನಡೆಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಕ್ಕಳು ತಮ್ಮ ಇತರ ದೈನಂದಿನ ಚಟುವಟಿಕೆಗಳಂತೆ ಸಸ್ಯಪಾಲನೆಯನ್ನೂ ರೂಢಿಯನ್ನಾಗಿಸಬೇಕು. ಮನೆಯಲ್ಲಿನ ಅಡುಗೆ ಗ್ಯಾಸ್ ಸಿಲಿಂಡರ್ ಮುಗಿದರೂ ಜೀವಿಸಬಹುದು ಆದರೆ ಪ್ರಕೃತಿಯ ಆಕ್ಸಿಜನ್ ಸಿಲಿಂಡರ್ ಮುಗಿದರೆ ಒಂದು ಕ್ಷಣ ಬದುಕಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದರು.

ವಲಯ ಅರಣ್ಯಾಧಿಕಾರಿ ಶ್ರೀಧರ್ ಮಾತನಾಡಿ, ಸಸ್ಯಸಂಕುಲ ಮತ್ತು ಸರಕಾರಿ ಶಾಲೆಗಳೆರಡೂ ಅಳಿವಿನಂಚಿನಲ್ಲಿದ್ದು,ಇವೆರಡೂ ಸಂಪೂರ್ಣ ಅವನತಿ ಕಂಡರೆ ಸಮಾಜದ ವ್ಯವಸ್ಥೆಯಲ್ಲಿ ವ್ಯತಿರಿಕ್ತ ಪರಿಣಾಮಗಳು ಬೀರುವುದು ಖಂಡಿತ. ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸದೊಂದಿಗೆ, ನಮ್ಮ ಮುಂದಿನ ಪೀಳಿಗೆಯವರು ಆರೋಗ್ಯವಾಗಿ ಬದುಕಲು ಸಸ್ಯರಾಶಿಗಳು ಅತ್ಯಗತ್ಯ. ಆದ್ದರಿಂದ ಎಳೆಯ ವಯಸ್ಸಿನಲ್ಲೇ ಮಕ್ಕಳು ಗಿಡಗಳನ್ನು ಬೆಳೆಸುವುದರ ಕಡೆಗೆ ಗಮನಹರಿಸುವಂತೆ ಕರೆ ನೀಡಿದರು.

ಈ ವೇಳೆ ಶಾಲಾ ಮಕ್ಕಳಿಗೆ ಅತಿಥಿಗಳು ಸಸಿಗಳನ್ನು ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಗ್ರಾ.ಪಂ ಸದಸ್ಯ ದೀಪಕ್ ಪಿಲಾರ್, ಲಯನ್ಸ್ ಕ್ಲಬ್ ಚಿಕ್ಕಮಗಳೂರಿನ ಅಧ್ಯಕ್ಷ ಸಂದೀಪ್ ಹೆಗ್ಡೆ, ಲಯನೆಸ್ ಗೀತಾ ಹೆಗ್ಡೆ, ಲ.ಉಷಾ ರಾಮಚಂದ್ರ, ಲ.ಬಾಲಕೃಷ್ಣ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಶಾರದಾ, ಸಮೂಹ ಸಂಪನ್ಮೂಲ ವ್ಯಕ್ತಿ ಕವಿತಾ,ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪಿ.ಸಿ ಇಮ್ತಿಯಾಝ್, ಕುಂಪಲ ಸರಕಾರಿ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ್, ಶಾಲಾ ಮುಖ್ಯೋಪಾಧ್ಯಾಯ ರೋಹಿತಾಶ್ವ ಯು ಉಚ್ಚಿಲ್, ಪತ್ರಕರ್ತ ವಿಧ್ಯಾಧರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News