ಸಾಹಿತ್ಯ ನೋವು ನಲಿವಿನ ಪ್ರಕಟ ವಿಧಾನ: ವಿಶ್ವನಾಥ ಬಿ.

Update: 2016-07-22 14:53 GMT

ಪುತ್ತೂರು, ಜು.22: ಸಾಹಿತ್ಯವು ಭಾವನೆಗಳ ತಾಕಲಾಟವಾಗಿದ್ದು, ಸಾಹಿತ್ಯದಲ್ಲಿ ಅನುಭವವನ್ನು ನೀಡಬಹುದಾಗಿದೆ. ನೋವು ನಲಿವುಗಳನ್ನು ಪ್ರಕಟಪಡಿಸುವ ವಿಧಾನವೂ ಸಾಹಿತ್ಯವಾಗಿ ಹೊರಹೊಮ್ಮುವುದು.ಆದ್ದರಿಂದ ಸಾಹಿತ್ಯ ಯುವ ಜನರನ್ನು ಹೆಚ್ಚು ಆಕರ್ಷಿಸುವಂತಿರಬೇಕು. ವಿಚಾರಹೀನ ಸಾಹಿತ್ಯ ಬಿಟ್ಟು ಮನಸ್ಸಿಗೆ ಮುದನೀಡುವ ಸಾಹಿತ್ಯ ಸೃಷ್ಟಿಯಾದರೆ ಜನರನ್ನು ಸೆಳೆಯಬಹುದು ಎಂದು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ವಿಶ್ವನಾಥ ಬಿ. ಹೇಳಿದರು.

ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಗುರುವಾರ ಆಯೋಜಿಸಿದ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ಯುವ ಜನತೆ ಹೆಚ್ಚೆಚ್ಚು ಓದುವಿಕೆಯಲ್ಲಿ ತೊಡಗಿಸಿಕೊಂಡಾಗ ಸಾಹಿತ್ಯ ರಚನೆಯತ್ತ ಆಸಕ್ತಿ ಮೂಡುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ.ಶ್ರೀಧರ್ ಮಾತನಾಡಿ, ಬರವಣಿಗೆಯಲ್ಲಿ ಕ್ರಿಯಾಶೀಲರಾದಾಗ ಚಟುವಟಿಕೆಯಿಂದಿರಲು ಸಾಧ್ಯ. ಯುವ ಜನರು ಬರವಣಿಗೆಯ ಮೂಲಕ ಪ್ರತೀ ಕ್ಷಣದ ಅನುವವನ್ನು ಪಡೆಯಲು ಸಿದ್ಧರಾಗಬೇಕು. ಸಾಹಿತ್ಯ ರಚನೆಯಲ್ಲಿ ಸಕ್ರಿಯರಾದರೆ ಬುದ್ಧಿ ಚುರುಕಾಗುತ್ತದೆ. ಯುವ ಜನರು ಉತ್ತಮ ಕಥೆ ಕಾವ್ಯ ರಚನೆಗೆ ಮುಂದಾಗಬೇಕು. ಬರವಣಿಗೆಯಲ್ಲಿ ಹೊಸತನವನ್ನು ಹುಟ್ಟು ಹಾಕಬೇಕು ಎಂದರು.

ವಿದ್ಯಾರ್ಥಿಗಳಾದ ಶ್ರೇಯಾ ಎಸ್., ಭಾನುಪ್ರಿಯಾ ಎಂ.ಬಿ., ಶಿಲ್ಪಾ ಎನ್.ವಿ., ರೂಪಶ್ರೀ, ಸುಪ್ರತಿ ಕೆ. ಕಥೆ, ಕವನಗಳನ್ನು ವಾಚಿಸಿದರು. ಸಾಹಿತ್ಯ ಮಂಟಪದ ಸಂಯೋಜಕ ಡಾ.ಮನಮೋಹನ ಎಂ. ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಸುಮಿತ್ರಾ ಸ್ವಾಗತಿಸಿ, ಕನ್ನಡ ಸಂಘದ ಕಾರ್ಯದರ್ಶಿ ಸೌಮ್ಯ ಬಿ.ಟಿ. ವಂದಿಸಿದರು. ಸಾಹಿತ್ಯ ಮಂಟಪದ ಕಾರ್ಯದರ್ಶಿ ಆಝಾದ್ ಕಂಡಿಗ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News