ಪುತ್ತೂರು: ಶಾಲಾ ಮಕ್ಕಳಿಗೆ ಕೃಷಿ ನಾಟಿ ಪಾಠ

Update: 2016-07-22 15:05 GMT

ಪುತ್ತೂರು, ಜು.22: ಭತ್ತ ಪ್ರಮುಖ ಆಹಾರ ಬೆಳೆಯಾಗಿದ್ದರೂ ಇಂದು ಹೆಚ್ಚಿನ ಮಕ್ಕಳಿಗೆ ಭತ್ತವನ್ನು ಯಾವ ರೀತಿ ಉತ್ಪಾದಿಸಲಾಗುತ್ತದೆ. ಭತ್ತವನ್ನು ಯಾವ ರೀತಿ ನಾಟಿ ಮಾಡಲಾಗುತ್ತಿದೆ, ಭತ್ತದಿಂದ ಅಕ್ಕಿಯನ್ನು ಯಾವ ರೀತಿ ತಯಾರಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ. ಪ್ರಸ್ತುತ ಭತ್ತದ ಗದ್ದೆಯನ್ನು ಕಾಣುವುದೇ ಅಪರೂಪವಾಗಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಆಸಕ್ತಿ ಹಾಗೂ ತಿಳುವಳಿಕೆ ಮೂಡಿಸಲು ಶಾಲೆಗಳು ಮುತ್ತು ಕೆಲವೊಂದು ಯುವಕ ಸಂಘಟನೆಗಳು ಮುಂದಾಗುತ್ತಿದೆ.

ಭತ್ತದ ಗದ್ದೆಯನ್ನು ಕಾಣುವುದೇ ಅಪರೂಪವಾಗಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಆಸಕ್ತಿ ಹಾಗೂ ತಿಳುವಳಿಕೆ ಮೂಡಿಸಲು ಪುತ್ತೂರು ತಾಲೂಕಿನ ಚೆನ್ನಾವರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿನ ಪಾಲ್ತಾಡಿ ಶ್ರೀವಿಷ್ಣು ಮಿತ್ರವೃಂದದವರು ಭತ್ತದ ನಾಟಿ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿದ್ದರು. ಮಕ್ಕಳನ್ನು ಗದ್ದೆಯ ಬಳಿ ಕರೆದುಕೊಂಡು ಹೋಗಿ ಅವರಿಗೆ ಭತ್ತದ ಕೃಷಿಯ ನೈಜತೆಯನ್ನು ತಿಳಿಸುವ ಪ್ರಯತ್ನ ನಡೆಸಿದರು. ಭತ್ತದ ಕೃಷಿಯ ಪರಿಣತರು ಮಕ್ಕಳಿಗೆ ನೇಜಿ ನಾಟಿಯ ಬಗ್ಗೆ ತರಬೇತಿ ನೀಡಿದರು. ಮಕ್ಕಳು ಮಳೆಯನ್ನೂ ಲೆಕ್ಕಿಸದೆ ಗದ್ದೆಗಿಳಿದು ಖುಷಿಪಟ್ಟರು. ಓ..ಬೇಲೆ...ಹಾಡು ಹಾಡುತ್ತಾ ನಾಟಿ ಮಾಡುವ ಮೂಲಕ ಸಂಭ್ರಮಿಸಿದರು. ಮಕ್ಕಳ ಜೊತೆಗೆ ಶಿಕ್ಷಕರು ತಾವೂ ನೇಜಿ ನೆಡುವ ಮೂಲಕ ಮಕ್ಕಳನ್ನು ಮತ್ತಷ್ಟು ಪ್ರೇರೇಪಿಸಿದರು.

ಬೇಸಾಯದ ಕುರಿತು ಹೆಚ್ಚಿನ ಅನುಭವ ಹೊಂದಿರುವ ಲಕ್ಷ್ಮೀ ರೈ, ನಳಿನಿ ರೈ, ಯೂಸುಫ್ ಕುಂಡಡ್ಕ, ಮೋನಪ್ಪ ನಾಯ್ಕ, ನೀಲಮ್ಮ, ಮುದರು, ಅಂಗಾರ ಮಕ್ಕಳಿಗೆ ನೇಜಿ ನೆಡುವ (ನಾಟಿ ಮಾಡುವ) ಬಗ್ಗೆ ಮಾಹಿತಿ ನೀಡಿದರು. ಮಕ್ಕಳೂ ಅವರ ಜತೆ ನಾಟಿ ಮಾಡಿ ಅನುಭವ ಪಡೆದುಕೊಂಡರು. ತಾವೂ ಮನೆಯ ಅಂಗಳದಲ್ಲಿ ನೇಜಿ ನೆಟ್ಟು ಬೆಳೆಸುತ್ತೇವೆ ಎಂದು ಮಕ್ಕಳು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಂಡರು.

ಚೆನ್ನಾವರ ಶಾಲಾ ಮುಖ್ಯಗುರು ಶಾಂತಾಕುಮಾರಿ, ಶಿಕ್ಷಕರಾದ ಶ್ವೇತಾ, ರಂಝೀನಾ, ಅಕ್ಷರ ದಾಸೋಹದ ಪವಿತ್ರ ವೇಣಿ, ಪದ್ಮಾವತಿ, ಹರೀಶ್ ರೈ, ಸುಬ್ಬಣ್ಣ ದಾಸ್, ಕಾರ್ಯಕ್ರಮ ಸಂಯೋಜಕ ಮಿತ್ರವೃಂದದ ಪ್ರವೀಣ್ ಕುಮಾರ್, ಧೀರಜ್ ರೈ, ಮನೀಶ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News