ಗುಂಡ್ಯದಲ್ಲಿ ಅಪಘಾತಕ್ಕೀಡಾದ ದ.ಕ. ನಿರ್ಗಮನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಕಾರು

Update: 2016-07-23 14:42 GMT

ಮಂಗಳೂರು, ಜು.23: ದ.ಕ ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿ ಎ. ಬಿ. ಇಬ್ರಾಹೀಂ ಅವರ ಫಾರ್ಚುನರ್ ಕಾರು ಗುಂಡ್ಯ ಬಳಿಯ ಉದನೆ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಜಿಲ್ಲಾಧಿಕಾರಿಯವರು ಅಪಾಯದಿಂದ ಪಾರಾಗಿದ್ದರೆ, ಅವರ ಪತ್ನಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರಿನಲ್ಲಿ ನಿರ್ಗಮನ ಜಿಲ್ಲಾಧಿಕಾರಿ, ಅವರ ಪತ್ನಿ ಸೌದಾ ಹಾಗೂ ಪುತ್ರ ರಝಾಕ್ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ ಪತ್ನಿ ಸೌದಾ ಅವರ ಬಲ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿ ಎ.ಬಿ.ಇಬ್ರಾಹೀಂ ಹಾಗೂ ಅವರ ಪುತ್ರ ರಝಾಕ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕ ರಫೀಕ್ ಎಂಬವರಿಗೂ ಗಾಯಗಳಾಗಿದೆ ಎಂದು ಹೇಳಲಾಗಿದೆ.

ಜಿಲ್ಲಾಧಿಕಾರಿಯವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇವರ ಕಾರು ಉದನೆ ಎಂಬಲ್ಲಿ ತಲುಪುದ್ದಂತೆ ಸ್ಕಾರ್ಪಿಯೊ ನಡುವೆ ಢಿಕ್ಕಿ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಎರಡೂ ಕಾರುಗಳು ಹಾನಿಗೀಡಾಗಿವೆ.

ಸ್ಕಾರ್ಪಿಯೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೈಕಿ ಇಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು, ಸ್ಕಾರ್ಪಿಯೋ ಕಾರು ಚಾಲಕ ಟ್ರಕ್‌ವೊಂದನ್ನು ಓವರ್‌ಟೇಕ್ ಮಾಡುವ ಧಾವಂತದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ವಾರ್ತಾಭಾರತಿಯೊಂದಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಗುಂಡ್ಯ ಬಳಿಯಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾವರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದರಿಂದ ಸುರಕ್ಷಿತವಾಗಿದ್ದು, ಪತ್ನಿಗೆ ಸ್ವಲ್ಪ ಪ್ರಮಾಣದಲ್ಲಿ ಗಾಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News