ದಲಿತ ದೌರ್ಜನ್ಯದ ಹಿಂದೆ ರಾಜಕೀಯ ಅಜೆಂಡಾ: ಜಿ.ರಾಜಶೇಖರ್

Update: 2016-07-24 13:34 GMT

ಉಡುಪಿ, ಜು.24: ಹಿಂದುತ್ವವಾದಿಗಳು ಹಾಗೂ ಮಠಾಧೀಶರು ಗೋವು ರಕ್ಷಣೆಗಿಂತ ಮೊದಲು ತಮ್ಮಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಕೃಷಿಗಾಗಿ ಜಾನುವಾರುಗಳನ್ನು ಸಾಕುವ ರೈತರ ಕಷ್ಟ ಹಾಗೂ ಅರ್ಥಶಾಸ್ತ್ರ ತಿಳಿಯದ ಹಿಂದುತ್ವವಾದಿಗಳಿಗೆ ಸಂಸ್ಕೃತಿಯ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ದಲಿತರ ಮೇಲೆ ದೌರ್ಜನ್ಯ ನಡೆಸುವ ಹಿಂದೆ ಸಂಘಪರಿವಾರದ ರಾಜಕೀಯ ಅಜೆಂಡಾ ಅಡಗಿದೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಆರೋಪಿಸಿದ್ದಾರೆ.

ಗುಜರಾತ್ ಗೋರಕ್ಷಕರಿಂದ ದಲಿತ ಯುವಕರ ಮೇಲೆ ಬರ್ಬರ ಹಲ್ಲೆ, ಮಾಹಾರಾಷ್ಟ್ರದಲ್ಲಿ ಅಂಬೇಡ್ಕರ್ ಸ್ಮಾರಕ ನೆಲಸಮ ಹಾಗೂ ಮಾಯಾವತಿ ಯನ್ನು ವೇಶ್ಯಗೆ ಹೋಲಿಸಿರುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕ ರವಿವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಹಿಂದುತ್ವವಾದಿಗಳು ಜನಗಳನ್ನು ಮರೆತು ದನಗಳನ್ನು ಎತ್ತಿ ಹಿಡಿಯುತ್ತಿ ದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಗೋರಕ್ಷಕರ ಹುಸಿ ಸಂಸ್ಕೃತಿಯ ವಿರುದ್ಧ ಜನ ಸೆಟೆದು ನಿಂತಿದ್ದಾರೆ. ಇಡೀ ದೇಶವನ್ನು ಆವರಿಸಿಕೊಂಡಿರುವ ಇವರ ಅಟ್ಟಹಾಸವನ್ನು ಹೋರಾಟದ ಮೂಲಕ ಮುರಿಯಬೇಕಾಗಿದೆ ಎಂದು ಅವರು ಹೇಳಿದರು.

ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ಎಲ್ಲಡೆ ದಲಿತ ದೌರ್ಜನ್ಯ ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ಯಾವುದೇ ಕ್ರಮಕೈಗೊಳ್ಳದ ಹಾಗೂ ಕನಿಷ್ಠ ಘಟನೆಯನ್ನು ಖಂಡಿಸದ ಪ್ರಧಾನಿ ನರೇಂದ್ರ ಮೋದಿಯ ಬಾಯಿಗೆ ಯಾವ ಧರ್ಮ ಬೀಗ ಜಡಿದಿದೆ ಎಂದು ಟೀಕಿಸಿದರು.

ದಲಿತರ ಮೇಲೆ ಬಿಜೆಪಿ ಆಡಳಿತದ ಸರಕಾರ ನಿರಂತರವಾಗಿ ಪೈಶಾಚಿಕವಾಗಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗುತ್ತಿದೆ. ಈ ಮೂಲಕ ಭಾರತದ ಸಂವಿಧಾನವನ್ನು ನಾಶಗೊಳಿಸಿ ಮನುವಾದವನ್ನು ಜಾರಿಗೊಳಿಸುವ ಸಂಚು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ವಕೀಲ ಮಂಜುನಾಥ ಗಿಳಿಯಾರು, ವಿಠಲ ಬಿರ್ತಿ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಕಾಂಗ್ರೆಸ್ ಮುಖಂಡ ಜನಾರ್ದನ ಭಂರ್ಡಾಕರ್, ಶಶಿಧರ್ ಹೆಮ್ಮಾಡಿ. ವೇದಿಕೆಯ ಉಪಾಧ್ಯಕ್ಷ ಕೆ.ಫಣಿರಾಜ್ ಮಾತನಾಡಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಾಮ್‌ರಾಜ್ ಭಿರ್ತಿ, ವಾಸುದೇವ ಮುದ್ದೂರು, ವಿಠಲ ತೊಟ್ಟಂ, ಚಂದ್ರಶೇಖರ ಹೆಬ್ರಿ, ಸುಂದರ ಕಪ್ಪೆಟ್ಟು, ರಾಜು ಬೆಟ್ಟಿನಮನೆ, ಮಾಲಿಂಗ ಕೋಟ್ಯಾನ್, ಕುಮಾರ್ ಕೋಟ, ಸುರೇಶ್ ಬಿರ್ತಿ, ಸುಂದರಿ ಪುತ್ತೂರು, ವೇದಿಕೆಯ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಸಲಾವುದ್ದೀನ್, ಹುಸೇನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News