ದೇರಳಕಟ್ಟೆ: ಯೇನೆಪೋಯ ವಿವಿಯಲ್ಲಿ ‘ಕರ್ಟನ್ ರೈಸಿಂಗ್’

Update: 2016-07-25 12:03 GMT

ಕೊಣಾಜೆ, ಜು.25: ಯೆನೆಪೊಯ ಸಂಸ್ಥೆ ತನ್ನ ಗುಣಮಟ್ಟದಲ್ಲಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಎಲ್ಲೂ ಕೂಡಾ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ಹಾಗೆಯೇ ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಶನ್‌ನ ಟ್ರಸ್ಟಿಗಳ ಪೂರ್ಣಪ್ರಮಾಣ ಸಹಕಾರದಿಂದ ಈ ಮಟ್ಟಿನ ಯಶಸ್ಸು ಸಾಧ್ಯವಾಗಿದೆ. ಜೊತೆಗೆ ಮಾನವೀಯ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಒಳ್ಳೆಯ ಹೆಸರು ಸಂಪಾದಿಸಿದ್ದು ಬೆಂಗಳೂರಿನ ರಾಜೀವ ಗಾಂಧಿ ವಿವಿಯಿಂದ ಮಾನ್ಯತೆ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ ಹೇಳಿದರು.

ಅವರು ಸೋಮವಾರ ದೇರಳಕಟ್ಟೆಯ ಯೆನೆಪೊಯ ಸೆಮಿನಾರ್ ಹಾಲ್‌ನಲ್ಲಿ ಇಸ್ಲಾಮಿಕ್ ಅಕಾಡೆಮಿ ಆಫ್ ಎಜ್ಯುಕೇಶನ್ ಮತ್ತು ಯೆನೆಪೊಯ ದಂತ ಮಹಾವಿದ್ಯಾಲಯದ 25 ವರುಷಗಳ ಸಂಭ್ರಮ ‘ಕರ್ಟನ್ ರೈಸಿಂಗ್’ನ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಾವುದೇ ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದ ಬಳಿಕ ಅದನ್ನು ಕಾರ್ಯಗತಗೊಳಿಸಲು ವಿಳಂಬ ಮಾಡಬಾರದು. ಹಿಂದೇಟು ಹಾಕಬಾರದು ಎಂದು ತಂದೆಯ ನುಡಿ ಹಾಗೂ ಮಾರ್ಗದರ್ಶನದಂತೆ ನಡೆಯುತ್ತಿರುವುದು ಸಂಸ್ಥೆಯ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ. ವಿಶೇಷವೆಂದರೆ ಸಮಾನ ಮನಸ್ಕರು ರಾತ್ರೋರಾತ್ರಿ ಕೈಗೊಂಡ ನಿರ್ಣಯದಂತೆ ಯೆನೆಪೊಯ ದಂತ ಮಹಾವಿದ್ಯಾಲಯ ಆರಂಭಗೊಂಡಿದ್ದು ಇದೀಗ ವಿಶ್ವಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.

ಯೆನೆಪೊಯ ವಿವಿ ಕರ್ನಾಟಕದಲ್ಲಿ ಡೀಮ್ಡ್ ಯುನಿವರ್ಸಿಟಿ ಆಗಿ ಅಲ್ಪಸಂಖ್ಯಾತ ಸಮುದಾಯದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶೈಕ್ಷಣಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಯೆನೆಪೊಯ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಪದವೀಧರರು ಪ್ರಪಂಚದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆ ಜಾರಿಗೆ ತರುವ ಗುರಿ ಇದೆ ಎಂದರು.

ಇಸ್ಲಾಮಿಕ್ ಆಕಾಡೆಮಿ ಆಫ್ ಎಜ್ಯುಕೇಶನ್‌ನ ಚೇರ್‌ಮೆನ್ ವೈ. ಮುಹಮ್ಮದ್ ಕುಂಞಿ, ಟ್ರಸ್ಟಿ ಬಿ.ಅಹ್ಮದ್ ಹಾಜಿ ಮೊಯ್ದೀನ್, ಯುನಿಟಿ ಆಸ್ಪತ್ರೆಯ ಚೇರ್‌ಮೆನ್ ಪಿ.ಸಿ. ಡಾ. ಹಬೀಬ್ ರಹ್ಮಾನ್, ಟ್ರಸ್ಟಿ ಖಾಲಿದ್ ಬಾವ, ಯೆನೆಪೊಯ ವಿವಿಯ ಕುಲಸಚಿವ ಡಾ.ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಸ್ಲಾಮಿಕ್ ಅಕಾಡೆಮಿಯ ಟ್ರಸ್ಟಿಗಳು ಹಾಗೂ ಸಂಸ್ಥೆಗಾಗಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಇಸ್ಲಾಮಿಕ್ ಆಕಾಡೆಮಿ ಆಫ್ ಎಜ್ಯುಕೇಶನ್‌ನ ಕಾರ್ಯದರ್ಶಿ ಡಾ.ಅಖ್ತರ್ ಹುಸೈನ್ ಯೆನೆಪೊಯ ದಂತ ಮಹಾವಿದ್ಯಾಲಯಕ್ಕೆ 25ವರುಷ ಸಂದ ಹಿನ್ನೆಲೆಯಲ್ಲಿ 25ವರುಷಗಳ ಪ್ರಯಾಣ ಹಾಗೂ ಯಶಸ್ಸಿನ ಹಾದಿಯ ಕುರಿತು ಮಾತನಾಡಿದರು.

ಯೆನೆಪೊಯ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ಎಚ್. ಶ್ರೀಪತಿ ರಾವ್ ಸ್ವಾಗತಿಸಿದರು. ಯೆನೆಪೊಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ವಿಜಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಡಾ. ಮಲ್ಲಿಕಾ ಶೆಟ್ಟಿ ಹಾಗೂ ಡಾ. ವಿನಿತಾ ಕಾರ್ಯಕ್ರಮ ನಿರೂಪಿಸಿದರು. ದಂತ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಡಾ. ಶ್ಯಾಮ್ ಎಸ್. ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News