ಪುತ್ತೂರು: ಖಾಸಗಿ ಬಸ್, ಟೆಂಪೋಗಳಿಗೆ ಭಾರೀ ಡಿಮಾಂಡು

Update: 2016-07-26 13:11 GMT

ಪುತ್ತೂರು, ಜು.26: ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ ಮಂಗಳವಾರವೂ ಮುಂದುವರೆದಿದ್ದು ಯಾವುದೇ ಸರಕಾರಿ ಬಸ್ಸುಗಳು ರಸ್ತೆಗಳಿದಿಲ್ಲ. ಆದರೆ ಪುತ್ತೂರಿನಲ್ಲಿ ಹಲವಾರು ಖಾಸಗಿ ಬಸ್ಸು, ಟೆಂಪೋ ಮತ್ತು ಇತರ ವಾಹನಗಳು ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದ ಕಾರಣ ಸರಕಾರಿ ಬಸ್ಸು ಇಲ್ಲದೇ ಇದ್ದರೂ ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗಿಲ್ಲ.

ಹಿಂದೆಂದೂ ಕಾಣದಷ್ಟು ಖಾಸಗಿ ಬಸ್‌ಗಳು, ಮಿನಿ ಬಸ್‌ಗಳು, ಟೆಂಪೋ ಟ್ರಾಕ್ಸ್‌ಗಳು, ಜೀಪುಗಳು, ಕಾರುಗಳು ಪುತ್ತೂರಿನಾದ್ಯಂತ ಮಂಗಳವಾರ ಬಾಡಿಗೆ ನಡೆಸಿದವು. ಪುತ್ತೂರಿನಿಂದ ಸುಳ್ಯಕ್ಕೆ ಸುಮಾರು 50 ಕ್ಕೂ ಮಿಕ್ಕಿ ಮಿನಿ ಬಸ್ಸುಗಳು ಸರ್ವಿಸ್ ನಡೆಸಿದವು, ಉಪ್ಪಿನಂಗಡಿ, ಬೆಳ್ಳಾರೆ, ವಿಟ್ಲ, ಮಂಗಳೂರು, ಸೇರಿದಂತೆ ಎಲ್ಲೆಲ್ಲಿ ಸರಕಾರಿ ಬಸ್ಸುಗಳ ರೂಟ್ ಇದೆಯೋ ಅಲ್ಲೆಲ್ಲಾ ಖಾಸಗಿ ವಾಹನಗಳು ಓಡಾಟ ನಡೆಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಿದವು.

ಸೋಮವಾರ ಕೆಲವು ವಾಹನ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಮಂಗಳವಾರದಂದು ನಿಗಧಿತ ದರವನ್ನೇ ವಸೂಲಿ ಮಾಡುವ ಮೂಲಕ ಖಾಸಗಿ ವಾಹನ ಚಾಲಕ ಮಾಲಕರು ಮಾನವೀಯತೆ ಮೆರೆದರು. ಪುತ್ತೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಎಂದಿನಂತೆ ನಡೆದಿದ್ದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News