ಬೆಳ್ತಂಗಡಿ: ಮುಂದುವರಿದ ರಾಜ್ಯ ಸರಕಾರಿ ಬಸ್ ನೌಕರರ ಮುಷ್ಕರ

Update: 2016-07-27 12:37 GMT

ಬೆಳ್ತಂಗಡಿ,ಜು.27: ರಾಜ್ಯ ಸರಕಾರಿ ಬಸ್ ನೌಕರರ ಮುಷ್ಕರದ ಮೂರನೇ ದಿನವಾದ ಬುಧವಾರ ಬೆಳ್ತಂಗಡಿ ತಾಲೂಕಿನಲ್ಲಿ ಸರಕಾರಿ ಬಸ್‌ಗಳು ಸಂಚಾರ ನಡೆಸಲಿಲ್ಲ. ಈ ಬಂದ್‌ನ ಲಾಭವನ್ನು ಖಾಸಗಿ ಬಸ್, ಟೆಂಪೋಗಳು ಸಂಪೂರ್ಣವಾಗಿ ಉಪಯೋಗಿಸುತ್ತಿರುವುದು ತಾಲೂಕಿನಾದ್ಯಂತ ಕಂಡು ಬಂತು.

 ತಾಲೂಕಿನ ವಿವಿದೆಡೆ ಧರ್ಮಸ್ಥಳ ಡಿಪೋದಿಂದ ಹೊರಡುತ್ತಿದ್ದ ಬಸ್ಸುಗಳು, ಹಾಗು ಮಂಗಳೂರು ಡಿಪೋದಿಂದ ತಾಲೂಕಿಗೆ ಬರುತ್ತಿದ್ದ ಬಸ್ಸುಗಳು ಸಂಚರಿಸಲಿಲ್ಲ,ವಿದ್ಯಾರ್ಥಿಗಳು ಇಂದೂ ಶಾಲಾ ಕಾಲೇಜುಗಳಿಗೆ ತಲುಪಲು ಪರದಾಡಬೇಕಾಗಿ ಬಂತು.

  ಸರಕಾರಿ ಬಸ್ ನೌಕರರ ಮುಷ್ಕರದಿಂದಾಗಿ ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಬಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರರ ಮೂಲಕ ಬುಧವಾರ ಮನವಿ ಮಾಡಿದ್ದಾರೆ.

       ಕಾಲೇಜಿನಲ್ಲಿ ಸುಮಾರು 800 ವಿದ್ಯಾರ್ಥಿಗಳಿದ್ದು ಅವರಲ್ಲಿ ಸುಮಾರು 500 ಮಂದಿ ಸರಕಾರಿ ಬಸ್‌ಗಳಲ್ಲಿ ಬರುವಂತಹವರಾಗಿದ್ದು ಪಾಸ್ ಹೊಂದಿದವರಗಿದ್ದಾರೆ. ಬಸ್ ಮುಷ್ಕರದಿಂದಾಗಿ ಕಾಲೇಜಿನಲ್ಲಿ ಹಾಜರಾತಿ ಕೂಡ ಕಡಿಮೆಯಾಗಿದೆ. ಖಾಸಗಿ ಬಸ್‌ನಲ್ಲಿ ವಿನಾಯತಿ ದರವನ್ನು ತೆಗೆದುಕೊಳ್ಳದೆ ಪೂರ್ತಿ ದರವನ್ನು ವಸೂಲು ಮಾಡುತ್ತಿದ್ದಾರೆ. ಪೂರ್ತಿ ದರ ಕೊಡದಿದ್ದರೆ ಬರಬೇಡಿ ಎಂದೂ ಹೇಳುತ್ತಿದ್ದಾರೆ. ಇದರಿಂದ ದಿಡುಪೆ, ಕಡಿರುದ್ಯಾವರ, ಎಳನೀರು, ಶಿಶಿಲ, ಕಾಯರ್ತಡ್ಕ, ಶಿಬಾಜೆ, ನೆರಿಯ, ಚಾರ್ಮಾಡಿ, ಬೆಳಾಲು, ತೋಟತ್ತಾಡಿ, ಸವಣಾಲು, ನಾವೂರು ಮೊದಲಾದ ಕಡೆಯಿಂದ ಬರುವ ಬಡ ವಿದ್ಯಾರ್ಥಿಗಳಿಗೆ ತೀವ್ರವಾದ ಸಮಸ್ಯೆಯಾಗಿದೆ. ಈ ಬಗ್ಗೆ ಗಮನ ಹರಿಸಿ ಕೂಡಲೇ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಪರಿಹರಿಸಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News