ಅಂಬಲಪಾಡಿ: ಫ್ಲೈ ಓವರ್‌ಗಾಗಿ ನಾಳೆ ಸಹಿ ಸಂಗ್ರಹ ಅಭಿಯಾನ

Update: 2016-07-27 18:30 GMT

ಉಡುಪಿ, ಜು.27: ಅಂಬಲಪಾಡಿ ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸಿ ಬಳಕೆದಾರರ ವೇದಿಕೆಯ ವತಿಯಿಂದ ಹೆದ್ದಾರಿ ಬಳಕೆದಾರರ ಸಹಿ ಸಂಗ್ರಹ ಅಭಿಯಾನವನ್ನು ಜು. 29ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಉಡುಪಿ ನಗರವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಅಂಬಲಪಾಡಿ ಜಂಕ್ಷನ್‌ನ ಅವ್ಯವಸ್ಥೆಯಿಂದ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಫ್ಲೈಓವರ್ ನಿರ್ಮಿಸುವ ಪ್ರಾಮುಖ್ಯತೆಯನ್ನು ಕಡೆಗಣಿಸಿ, ಹಿತಾಸಕ್ತಿಗಳ ಅನುಕೂಲಕ್ಕೆ ಅನುಗುಣವಾಗಿ ಫೂಟ್ ಓವರ್ ಸೇತುವೆ ನಿರ್ಮಿಸುವ ಹುನ್ನಾರ ಮಾಡಲಾಗುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಕಡೆಕಾರ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದರು.
 ಈ ಹಿನ್ನೆಲೆಯಲ್ಲಿ ಬಳಕೆದಾರರ ಬೇಡಿಕೆಯನ್ನು ಸರ ಕಾರಕ್ಕೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಅಭಿ ಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 9:30ಕ್ಕೆ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ, ಮಾಜಿ ಸೈನಿಕ ಆರ್.ಎಲ್.ಡಯಾಸ್ ಈ ಅಭಿಯಾನಕ್ಕೆ ಚಾಲನೆ ನೀಡಲಿರುವರು. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ತಮ್ಮ ಅನಿಸಿಕೆ ಮತ್ತು ಭರವಸೆಯನ್ನು ವ್ಯಕ್ತಪಡಿಸಲಿರುವರು. ಪ್ಲೈಓವರ್ ಕುರಿತ ತಾಂತ್ರಿಕ ಮಾಹಿತಿಯನ್ನು ನಿವೃತ್ತ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಶಾಂತರಾಜ್ ಐತಾಳ್ ನೀಡಲಿರುವರು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಹಸಂಚಾಲಕ ಅಲ್ತಾಫ್ ಅಹ್ಮದ್, ವಿಶು ಶೆಟ್ಟಿ, ಮನೋಹರ್ ಶೆಟ್ಟಿ, ಬಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News