ಬೀದಿ ಬದಿ ವ್ಯಾಪಾರಸ್ಥರಿಂದ ಧರಣಿ ಸತ್ಯಾಗ್ರಹ

Update: 2016-07-28 07:40 GMT

ಮಂಗಳೂರು,ಜು.28: ತಮ್ಮ ಮೇಲೆ ಮಂಗಳೂರು ಮಹಾನಗರ ಪಾಲಿಕೆಯು ದಬ್ಬಾಳಿಕೆ ನಡೆಸುವುದನ್ನು ಕೈಬಿಟ್ಟು, ಗೌರವಯುತ ಬದುಕಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಬೀದಿ ಬದಿ ವ್ಯಾಪಾರಸ್ಥರು ಇಂದು ಧರಣಿ ಸತ್ಯಾಗ್ರಹ ನಡೆಸಿದರು.

ಮನಪಾ ಕಚೇರಿ ಎದುರು ಇಂದು ಬೆಳಗ್ಗೆ ಧರಣಿ ಆರಂಭಿಸಿದ ಬೀದಿಬದಿ ವ್ಯಾಪಾರಸ್ಥರು, 208 ಮಂದಿ ವ್ಯಾಪಾರಸ್ಥರ ಗುರುತು ಚೀಟಿ ನವೀಕರಣ ಹಾಗೂ ಬಾಕಿ ಉಳಿದಿರುವ 350 ಮಂದಿಗೆ ಗುರುತು ಚೀಟಿಯನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿದರು.

ಧರಣಿ ನಿರತರ ಪರವಾಗಿ ಮಾತನಾಡಿದ ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಬೀದಿ ಬದಿವ್ಯಾಪಾಸ್ಥರ ಪರವಾಗಿ ದೇಶದ ಸಂಸತ್ತಿನಲ್ಲಿ ಮಸೂದೆ ಜಾರಿಗೊಂಡಿದ್ದರೂ ಅದನ್ನು ಜಾರಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದು ದೂರಿದರು.

ಮಸೂದೆ ಆಧಾರದಲ್ಲಿ ರಾಜ್ಯ ಸರಕಾರಗಳು ವಿಶೇಷ ನಿಯಮಾವಳಿಗಳನ್ನು ರೂಪಿಸಬೇಕೆಂದಿದ್ದರೂ ಈ ಬಗ್ಗೆ ಸರಕಾರ ಕ್ರಮ ಕೈಗೊಂಡಿಲ್ಲ. ಬದಲಾಗಿ ನಗರ ಮಾರಾಟಗಾರರ ಸಮಿತಿ (ಟೌನ್ ವೆಂಡಿಂಗ್ ಸಮಿತಿ) ಸಭೆ ಸೇರದೆ ಒಂಭತ್ತು ತಿಂಗಳಾಗಿವೆ. ಕಳೆದ ಬಾರಿ 208 ಮಂದಿಗೆ ಗುರುತು ಚೀಟಿ ನೀಡಲಾಗಿದ್ದು, 2015ರ ಅಕ್ಟೋಬರ್‌ಗೆ ಅದರ ಅವಧಿ ಮುಗಿದಿತ್ತು. ಬಳಿಕ ಗುರುತು ಚೀಟಿ ನವೀಕರಣಗೊಂಡಿಲ್ಲ. ಉಳಿದ 350 ಮಂದಿಗೆ ನೀಡಲು ಗುರುತುಚೀಟಿ ಮುದ್ರಣಗೊಂಡು 1 ವರ್ಷ ಕಳೆದರೂ ಅದನ್ನು ವಿತರಿಸಲಾಗಿಲ್ಲ. ಈ ಮೂಲಕ ಮಂಗಳೂರು ಮಹಾನಗರ ಪಾಲಿಕೆಯು ಬೀದಿಬದಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದೆ. ಜು.29ರಂದು ಮನಪಾ ಸಾಮಾನ್ಯ ಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಕುರಿತಂತೆ ಚರ್ಚೆ ನಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಸುನಿಲ್ ಕುಮಾರ್ ಬಜಾಲ್ ನುಡಿದರು.

ಧರಣಿ ಸತ್ಯಾಗ್ರಹದಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಕೋಶಾಕಾರಿ ಅತಾವುಲ್ಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News