ಪುತ್ತೂರು: ಕೆಎಸ್ಸಾರ್ಟಿಸಿ ಸಿಬ್ಬಂದಿಯಿಂದ ಧರಣಿ

Update: 2016-07-28 12:13 GMT

ಪುತ್ತೂರು, ಜು.28: ಮುಷ್ಕರ ಮುಗಿದು ಕರ್ತವ್ಯಕ್ಕೆ ಹಾಜರಾದ ತರಬೇತಿ ಚಾಲಕ-ನಿರ್ವಾಹಕರನ್ನು ಗುರುವಾರ ಕರ್ತವ್ಯಕ್ಕೆ ಸೇರಿಸಿಕೊಳ್ಳದ ಪುತ್ತೂರು ಕೆಎಸ್ಸಾರ್ಟಿಸಿ ಘಟಕದ ಅಧಿಕಾರಿಗಳ ಕ್ರಮದ ವಿರುದ್ಧ ಮುಕ್ರಂಪಾಡಿ ಘಟಕದೊಳಗೆ ಸಿಬ್ಬಂದಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ವೇತನ ಹೆಚ್ಚಿಸುವಂತೆ ಆಗ್ರಹಿಸಿ ಯೂನಿಯನ್ ಕರೆ ನೀಡಿದ್ದ ಬಂದ್ ದಿನಗಳಲ್ಲಿ ತರಬೇತಿಯಲ್ಲಿರುವ ಚಾಲಕ- ನಿರ್ವಾಹಕರನ್ನು ಕರ್ತವ್ಯಕ್ಕೆ ಆಗಮಿಸುವಂತೆ ಸೂಚಿಸಲಾಗಿತ್ತು. ಆದರೆ ಮುಷ್ಕರ ಹಿನ್ನೆಲೆಯಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಬುಧವಾರ ಯೂನಿಯನ್ ಮುಷ್ಕರ ಹಿಂದೆಗೆದುಕೊಂಡಿದ್ದು, ಗುರುವಾರ ಬೆಳಗ್ಗೆ ಬಸ್ ಸಂಚಾರ ಆರಂಭಗೊಂಡಿತ್ತು. ಬೆಳಗ್ಗೆ 49 ಕೆಎಸ್ಸಾರ್ಟಿಸಿ ಬಸ್‌ಗಳು ರೂಟ್‌ಗೆ ತೆರಳಿದ್ದವು. ಅಷ್ಟರಲ್ಲಿ ತರಬೇತಿಯಲ್ಲಿರುವ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಕದೇ ಇರುವ ವಿಚಾರ ಬೆಳಕಿಗೆ ಬಂದಿದೆ. ತರಬೇತಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಕದೇ, ಉಳಿದ ಚಾಲಕ- ನಿರ್ವಾಹಕರು ಕರ್ತವ್ಯಕ್ಕೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಪುತ್ತೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 74 ತರಬೇತಿ ಚಾಲಕ- ನಿರ್ವಾಹಕರನ್ನು ಗುರುವಾರ ಕರ್ತವ್ಯಕ್ಕೆ ನಿಯೋಜಿಸಿರಲಿಲ್ಲ. ಕರ್ತವ್ಯ ಸೂಚಿಸದೇ ಇದ್ದರೆ ಆ ದಿನದ ವೇತನ ಪಾವತಿ ಆಗುವುದಿಲ್ಲ. ಯೂನಿಯನ್ ನೀಡಿದ ಕರೆ ಹಿನ್ನೆಲೆಯಲ್ಲಿ ತರಬೇತಿಯಲ್ಲಿರುವ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲು ಹಿಂಜರಿದಿದ್ದರು. ಇದೀಗ ಅಧಿಕಾರಿಗಳು ದಂಡನೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಉಳಿದ ಚಾಲಕರು ತರಬೇತಿ ಸಿಬ್ಬಂದಿಯ ಪರವಾಗಿ ನಿಂತು, ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ಡೆಪ್ಯೂಟಿ ಟ್ರಾಫಿಕ್ ಆಫೀಸರ್ ವೆಂಕಟೇಶ್, ಚಾಲಕ- ನಿರ್ವಾಹಕರನ್ನು ಕರ್ತವ್ಯಕ್ಕೆ ತೆರಳುವಂತೆ ಸೂಚಿಸಿದರು. ಇದಕ್ಕೆ ಸಮ್ಮತಿ ಸೂಚಿಸಲಿಲ್ಲ. ಬಳಿಕ ತರಬೇತಿ ಚಾಲಕ- ನಿರ್ವಾಹಕರಿಗೆ ಶುಕ್ರವಾರ ಕರ್ತವ್ಯ ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಬಸ್‌ಗಳು ಎಂದಿನಂತೆ ರೂಟ್‌ಗೆ ತೆರಳಿದವು.

ಡಿಪೊ ಮ್ಯಾನೇಜರ್ ಚೆನ್ನಬಸವಯ್ಯ, ಅಸಿಸ್ಟೆಂಟ್ ಟ್ರಾಫಿಕ್ ಸೆಕ್ಯುರಿಟಿ ನಾಗರಾಜ್, ಟ್ರಾಫಿಕ್ ಇನ್‌ಸ್ಪೆಕ್ಟರ್ ಅಪ್ಪಯ್ಯ ನಾಯ್ಕೆ, ಅಸಿಸ್ಟೆಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ ತಮ್ಮಣ್ಣ ನಾಯ್ಕ ಸಿಬ್ಬಂದಿಯ ಮನವೊಲಿಸಲು ಪ್ರಯತ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News