ದಾರಿ ದೀಪಗಳಿಲ್ಲದೆ ಕತ್ತಲಲ್ಲಿ ಬಂಟ್ವಾಳ: ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

Update: 2016-07-28 15:51 GMT

ಬಂಟ್ವಾಳ, ಜು. 28: ಮೇ ತಿಂಗಳಿನಲ್ಲಿ ತಾಲೂಕಿನ ವಿವಿಧೆಡೆ ಉಂಟಾದ ಪ್ರಾಕೃತಿಕ ವಿಕೋಪದಿಂದ ವಿದ್ಯುತ್ ಕಂಬಗಳು ಹಾನಿಗೀಡಾಗಿ ಕೆಟ್ಟು ಹೋದ ದಾರಿದೀಪಗಳನ್ನು ಇನ್ನು ಕೂಡಾ ದುರಸ್ಥಿ ಮಾಡದಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಅಧ್ಯಕ್ಷರು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ನಡೆದ ಇಲ್ಲಿನ ಪುರಸಭಾ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವರ ಸಭಾಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಸದಸ್ಯೆ ಚಂಚಲಾಕ್ಷಿ, ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ಸೇತುವೆಯ ಸಹಿತ ವಿವಿಧೆಡೆ ದಾರಿದೀಪಗಳು ಉರಿಯದಿರುವುದರಿಂದ ಕತ್ತಲು ಆವರಿಸಿದೆ ಎಂದು ಅಸಮಾಧಾನ ಹೊರ ಹಾಕಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಗಂಗಾಧರ, ಪ್ರವೀಣ ಬಿ., ಜಸಿಂತ, ಸಂಜೀವಿನಿ ದಾರಿ ದೀಪ ನಿರ್ವಹಣೆ ಗುತ್ತಿಗೆದಾರರು ಸದಸ್ಯರ ದೂರವಾಣಿಗೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ದಾರಿ ದೀಪ ನಿರ್ವಹಣೆ ಗುತ್ತಿಗೆದಾರರ ಅವಧಿ ಮುಕ್ತಾಯದ ಹಂತದಲ್ಲಿದೆ. ಈ ಬಗ್ಗೆ ಹೊಸ ಟೆಂಡರ್ ಕರೆಯಲಾಗುತ್ತಿದೆ ಎಂದರು. ಶಾಸಕರು, ಸಂಸದರ ವೇತನ ಸರಕಾರ ಹೆಚ್ಚಿಸುತ್ತಿದೆ. ಹಾಗೆಯೇ ಪುರಸಭಾ ಸದಸ್ಯರ ಗೌರವ ಧನವನ್ನು ಹೆಚ್ಚಿಸುವಂತೆ ಕೈಗೊಂಡ ನಿರ್ಣಯಕ್ಕೆ ಸ್ಪಂದನೆ ದೊರಕಿದೆಯೇ ಎಂದು ಸದಸ್ಯ ಗಂಗಾಧರ್ ಪ್ರಶ್ನಿಸಿದಾಗ ನಿರ್ಣಯವನ್ನು ಸರಕಾರಕ್ಕೆ ರಮಾನಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವಾಸು ಪೂಜಾರಿ, ಶೀಘ್ರದಲ್ಲೇ ರಾಜ್ಯದ ವಿವಿಧ ಪುರಸಭೆ, ನಗರ ಪಂಚಾಯತ್, ಪಾಲಿಕೆ, ನಗರ ಸಭಾ ಸದಸ್ಯರನ್ನೊಳಗೊಂಡ ನಿಯೋಗವನ್ನು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಕುರಿತ ಅಹವಾಲು ಮಂಡಿಸಲಿದ್ದಾರೆ. ಆಗ ನಮ್ಮ ಪುರಸಭೆಯಿಂದಲೂ ಕೈ ಜೋಡಿಸಿದರೆ ಉತ್ತಮ ಎಂದರು. ಇದಕ್ಕೆ ಅಧ್ಯಕ್ಷರು ಸಹ ಮತ ವ್ಯಕ್ತಪಡಿಸಿದರು.

ಲೆಕ್ಕ ಪತ್ರ ಗದ್ದಲ

ಸಭೆ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಕಲಾಪಕ್ಕೆ ಹಾಜರಾದ ಆಡಳಿತ ಪಕ್ಷದ ಸದಸ್ಯ ಸದಾಶಿವ ಬಂಗೇರ, ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ನಿರ್ಮಾಣ ಹಂತದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ 2011-12ನೆ ಸಾಲಿನ 13ನೆ ಹಣಕಾಸಿನಡಿ ಕಾದಿರಿಸಲಾದ 68.40 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆದಿದೆಯೇ? ಇಲ್ಲದಿದ್ದರೆ ಆ ಹಣ ಯಾವ ಖಾತೆಯಲ್ಲಿ ಜಮೆಯಾಗಿದೆ? ಕಾಮಗಾರಿಯಾಗಿದ್ದರೆ ಎಷ್ಟು ಖರ್ಚಾಗಿದೆ? ಎಂದು ನೇರವಾಗಿ ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು. ಈ ವಿಚಾರದಲ್ಲಿ ಸುದೀರ್ಘ ಎರಡು ತಾಸುಗಳ ಕಾಲ ಚರ್ಚೆ ನಡೆಯಿತು.

ಕೊನೆಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸುಧಾಕರ್ ಈ ಕುರಿತ ಎಲ್ಲ ಲೆಕ್ಕಪತ್ರದ ದಾಖಲೆಯನ್ನು ಲಿಖಿತ ರೂಪದಲ್ಲಿ ಮುಂದಿನ ಸಭೆಗೆ ಒದಗಿಸಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.

ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ವೇದಿಕೆಯಲ್ಲಿದ್ದು ಕಲಾಪಕ್ಕೆ ಅಧ್ಯಕ್ಷರೊಂದಿಗೆ ಸಹಕರಿಸಿದರು. ವಸಂತಿ ಚಂದಪ್ಪ, ಯಾಸ್ಮೀನ್, ಜಗದೀಶ್ ಕುಂದರ್, ಮುಹಮ್ಮದ್ ಇಕ್ಬಾಲ್, ಮುನೀಶ್ ಅಲಿ, ಬಿ.ಮೋಹನ್, ಶರೀಪ್, ಮುಮ್ತಾರ್ ನಾಮನಿರ್ದೇಶಕ ಸದಸ್ಯರು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News