ಅತ್ಯಾಚಾರ ಪ್ರಕರಣದ ಅಪರಾಧಿಗೆ 5 ವರ್ಷ ಕಠಿಣ ಸಜೆ

Update: 2016-07-28 15:57 GMT

ಮಂಗಳೂರು, ಜು. 28: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿಯೋರ್ವನಿಗೆ ಮಂಗಳೂರು 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಪುತ್ತೂರು ತಾಲೂಕು ಕೋಡಿಂಬಾಳ ಗ್ರಾಮದ ಅಸಂತಡ್ಕ ನಿವಾಸಿ ಸುಂದರ (31) ಶಿಕ್ಷೆಗೊಳಗಾದ ಅಪರಾಧಿ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಕಠಿಣ ಸಜೆ ಅನುಭವಿಸುವಂತೆ ಮತ್ತು ದಂಡದ ಮೊತ್ತದಲ್ಲಿ 8 ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ವಂಚನೆ ಪ್ರಕರಣದಲ್ಲಿ 3 ತಿಂಗಳು ಸಾದಾ ಸಜೆ ಅನುಭವಿಸುವಂತೆಯೂ ನ್ಯಾಯಾಧೀಶ ಪುಟ್ಟರಂಗ ಸ್ವಾಮಿ ತೀರ್ಪಿನಲ್ಲಿ ತಿಳಿಸಿದ್ದಾರೆ.

2007ರಲ್ಲಿ ಸುಂದರ ತನ್ನ ದೂರದ ಸಂಬಂಧಿ 24 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ. ಈ ಬಗ್ಗೆ 2009 ನವೆಂಬರ್ 7 ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಕೆ ಗರ್ಭಿಣಿಯಾದಾಗ ಮದುವೆಯಾಗಲು ನಿರಾಕರಿಸಿದ್ದ. ಬಳಿಕ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಈ ಸಂಬಂಧ ಮಗು, ಆರೋಪಿ ಹಾಗೂ ಯುವತಿಯ ರಕ್ತವನ್ನು ಡಿಎನ್‌ಎಗೆ ಪರೀಕ್ಷೆಗೊಳಪಡಿಸಲಾಗಿತ್ತು. ಡಿಎನ್‌ಎಯಲ್ಲಿ ಸುಂದರನೇ ಮಗುವಿನ ಜೈವಿಕ ತಂದೆ ಎಂದು ವರದಿ ಬಂದಿತ್ತು. ಪುತ್ತೂರು ಸೆಷನ್ಸ್ ಕೋರ್ಟ್‌ನಲ್ಲಿದ್ದ ಈ ಪ್ರಕರಣ 2015 ರಲ್ಲಿ ಮಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ.ಕ್ರಾಸ್ತಾ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News