ಫ್ಲೈ ಓವರ್‌ಗಾಗಿ ಸಹಿ ಸಂಗ್ರಹ ಅಭಿಯಾನ

Update: 2016-07-29 18:25 GMT

ಉಡುಪಿ, ಜು.29: ಅಂಬಲಪಾಡಿ ಜಂಕ್ಷನ್‌ನಲ್ಲಿ ಫ್ಲೈಓವರ್ ನಿರ್ಮಿಸುವಂತೆ ಆಗ್ರಹಿಸಿ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿ 66ರ ಬಳಕೆದಾರರ ವೇದಿಕೆಯ ವತಿಯಿಂದ ಹೆದ್ದಾರಿ ಬಳಕೆದಾರರ ಸಹಿ ಸಂಗ್ರಹ ಅಭಿಯಾನವನ್ನು ಇಂದು ಅಂಬಲಪಾಡಿ ಜಂಕ್ಷನ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನಕ್ಕೆ ಹಿರಿಯ ನಾಗರಿಕ ಎಸ್.ಎಸ್.ತೋನ್ಸೆ ಚಾಲನೆ ನೀಡಿ ಮಾತನಾಡಿ, ಅಂಬಲಪಾಡಿ ಜಂಕ್ಷನ್‌ನಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು, ಮೃತ್ಯುಕೂಪವಾಗಿ ಪರಿಣಮಿಸಿದೆ. ನಾಲ್ಕು ರಸ್ತೆಗಳು ಸೇರುವ ಈ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಅನಿವಾರ್ಯವಾಗಿದೆ ಎಂದು ಹೇಳಿದರು.

ವೇದಿಕೆಯ ಅಧ್ಯಕ್ಷ ಭಾಸ್ಕರ್ ಶೆಟ್ಟಿ ಕಡೆಕಾರ್ ಮಾತನಾಡಿ, ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಅಭಿಯಾನದಲ್ಲಿ ಮನೆಮನೆಗಳಿಗೆ ತೆರಳಿ ಪ್ರತಿಯೊಬ್ಬರ ಸಹಿ ಸಂಗ್ರಹ ಮಾಡಲಾಗುವುದು. ಈ ಜಂಕ್ಷನ್ ಬಳಕೆ ಮಾಡುವ ಪ್ರತಿಯೊಬ್ಬ ಬಳಕೆದಾರನ ಸಹಿ ಪಡೆದುಕೊಂಡು ಹೋರಾಟವನ್ನು ತೀವ್ರಗೊಳಿಸಲಾಗುವುದು. ಸಂಗ್ರಹಿಸಿದ ಸಹಿಯನ್ನು ಪ್ರಧಾನಿ ಹಾಗೂ ಹೆದ್ದಾರಿ ಸಚಿವರಿಗೆ ಸಲ್ಲಿಸಲಾಗುವುದು. ಇದಕ್ಕೆ ಶಾಶ್ವತ ಪರಿಹಾರ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.

ಸಂಸತ್ ಅಧಿವೇಶನದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಆಸ್ಕರ್ ಫೆರ್ನಾಂಡಿಸ್ ಈ ವಿಚಾರವನ್ನು ಮಂಡಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಲ್ಲಿ ವಾಹನ ಸಂಚಾರದ ಸಮೀಕ್ಷೆಯನ್ನು ನಡೆಸಬೇಕು. ತಜ್ಞರ ಸಮಿತಿ ರಚಿಸಿ ಇಲ್ಲಿ ಫ್ಲೈಓವರ್ ಎಷ್ಟು ಸೂಕ್ತ ಎಂಬುದರ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ಲೈಓವರ್ ಕುರಿತ ತಾಂತ್ರಿಕ ಮಾಹಿತಿಯನ್ನು ನಿವೃತ್ತ ಲೋಕೋಪಯೋಗಿ ಕಾರ್ಯನಿರ್ವಾಹಕ ಅಭಿಯಂತರ ಶಾಂತರಾಜ್ ಐತಾಳ್ ನೀಡಿದರು. ಸ್ಥಳೀಯ ಜನಪ್ರತಿನಿಧಿಯಾಗಿರುವ ನಗರಸಭೆ ಸದಸ್ಯೆ ವಸಂತಿ ಶೆಟ್ಟಿ ಅಂಬಲಪಾಡಿ ಹಾಗೂ ಹಿರಿಯ ಬಳಕೆದಾರರಾಗಿ ನಿವೃತ್ತ ಪ್ರಾಂಶುಪಾಲ ರಾಧಾಕೃಷ್ಣ ಆಚಾರ್ಯ ಪತ್ರಕ್ಕೆ ಸಹಿ ಮಾಡಿದರು.

ಪ್ರಕಾಶ್ ಸಂಸ್ಥೆಯ ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಸ್ವಾಗತಿಸಿದರು. ಅಂಬಲಪಾಡಿ ಕೀರ್ತಿ ಶೆಟ್ಟಿ ವಂದಿಸಿದರು. ವೇದಿಕೆಯ ಸಹಸಂಚಾಲಕ ಅಲ್ತಾಫ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News