ಮಕ್ಕಳ ಶಿಕ್ಷಣ ಭವಿಷ್ಯದಲ್ಲಿ ಪೋಷಕರ ಪಾತ್ರ ಹಿರಿದು : ಯು.ಟಿ.ಖಾದರ್

Update: 2016-07-30 12:48 GMT

ಮಂಜೇಶ್ವರ,ಜು.30: ಮಕ್ಕಳ ಶಿಕ್ಷಣದ ಉನ್ನತಿಯಲ್ಲಿ ಪೋಷಕರು ಬಹಳಷ್ಟು ಗಮನ ಹರಿಸಬೇಕು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣದಲ್ಲಿ ಪೋಷಕರು ಸೂಕ್ಷ್ಮ ನಿಲುವು ಹೊಂದಿರಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರಿಗಿಂತಲೂ ರಕ್ಷಕರ ಪಾತ್ರ ಹಿರಿದು ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಇಲ್ಲಿನ ಉದ್ಯಾವರ ಸರಕಾರಿ ಪ್ರೌಢಶಾಲೆಯಲ್ಲಿ 30 ಲಕ್ಷ ರೂ.ಅನುದಾನದಲ್ಲಿ ರಾಜ್ಯಸಭಾ ಸದಸ್ಯೆ ಡಾ. ಬಿ.ಜಯಶ್ರೀ ಅವರ ಅನುದಾನದಿಂದ ಆಧುನಿಕ ಕಾಲಘಟ್ಟದಲ್ಲಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಬಹಳಷ್ಟು ಅಭಿವೃದ್ಧಿಯನ್ನು ಜಗತ್ತಿನಲ್ಲಿಯೇ ಗಮನ ಸೆಳೆದಿದೆ. ಇಂತಹ ತಂತ್ರಜ್ಞಾನದ ಶಿಕ್ಷಣಕ್ಕೆ ಮಕ್ಕಳನ್ನು ಸಜ್ಜುಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ತಂದೆ ತಾಯಿಗಿದೆ ಎಂದು ಅವರು ಹೇಳಿದರು.

ಸಭಾ ಕಾರ್ಯಕ್ರಮವನ್ನು ಕಾಸರಗೋಡು ಸಂಸದ ಪಿ.ಕರುಣಾಕರನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಶಾಲೆಯ ಅಸೆಂಬ್ಲಿ ಹಾಲ್ ಸಹಿತ ವಿವಿಧ ಅಭಿವೃದ್ಧಿಗೆ ಸಂಸದ ನಿಧಿಯಿಂದ ಮೊತ್ತ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಮಂಜೇಶ್ವರ ಶಾಸಕ ಪಿ.ಬಿ.ಅಬ್ದುರ್ರಝಾಕ್ ಮಾತನಾಡಿ, ಶಾಲೆಗೆ ಶಾಸಕರ ನಿಧಿಯಿಂದ 5 ಕಂಪ್ಯೂಟರ್‌ಗಳನ್ನು ಮಂಜೂರು ಮಾಡಿರುವುದಲ್ಲದೆ, ಶಾಲಾ ಲ್ಯಾಬ್ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ದೊರಕಿಸುವುದಾಗಿ ಘೋಷಿಸಿದರು.

ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ, ಬ್ಲಾಕ್ ಪಂಚಾಯತ್ ಸದಸ್ಯರಾದ ಹಸೀನಾ ಹಮೀದ್, ಕೆ.ಆರ್. ಜಯಾನಂದ, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯೆ ಫಾತಿಮತ್ ಝೌರಾ ಮುಂತಾದವರು ಉಪಸ್ಥಿತರಿದ್ದು ಶುಭಾಶಂಸನೆಗೈದರು.

ಶಾಲಾ ಪ್ರಾಂಶುಪಾಲ ಕೆ.ಶ್ರೀನಿವಾಸ್ ಸ್ವಾಗತಿಸಿದರು. ಆರ್‌ಎಂಎಸ್‌ಎ ಸಹಾಯಕ ಯೋಜನಾಧಿಕಾರಿ ಶ್ರೀನಿವಾಸ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್., ಪಂ.ಮಾಜಿ ಸದಸ್ಯ ಹರೀಶ್ಚಂದ್ರ , ರಾಜೇಶ್ ಕುಮಾರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಸನಬ್ಬ, ಯೂಸುಫ್ ಜಮಾಲ್, ಪ್ರಶಾಂತ್ ಕುಮಾರ್, ಆನಂದ ಮಾಸ್ತರ್, ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಎಸ್‌ಆರ್‌ಜಿ ಸಂಚಾಲಕಿ ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News