ಬೆಳ್ತಂಗಡಿ: ಯೋಧ ಏಕನಾಥ ಶೆಟ್ಟಿಯವರ ಮನೆಗೆ ಕೇಂದ್ರ ಸಚಿವ ಡಿ.ವಿ.ಎಸ್ ಭೇಟಿ; ಸಾಂತ್ವನ

Update: 2016-07-30 14:32 GMT

ಬೆಳ್ತಂಗಡಿ, ಜು.30: ಜು. 22 ರಂದು ವಾಯಸೇನಾ ವಿಮಾನದಲ್ಲಿ ನಾಪತ್ತೆಯಾದ ಯೋಧ ಏಕನಾಥ ಶೆಟ್ಟಿ ಅವರ ಗುರುವಾಯನಕೆರೆಯಲ್ಲಿನ ಮನೆಗೆ ಕೇಂದ್ರ ಅಂಕಿ ಅಂಶ ಖಾತೆ ಸಚಿವ ಡಿ.ವಿ. ಸದಾನಂದ ಗೌಡರು ಶನಿವಾರ ಸಂಜೆ ಭೇಟಿ ನೀಡಿ ಏಕನಾಥ ಶೆಟ್ಟಿಯವರ ಪತ್ನಿ ಜಯಂತಿ ಅವರಿಗೆ ಸಾಂತ್ವನ ಹೇಳಿದರು.

ಯೋಧ ಏಕನಾಥ ಶೆಟ್ಟಿಯವರ ಸೇನಾ ಜೀವನದ ವಿವರಗಳನ್ನು ಮನೆಯವರಿಂದ ಪಡೆದುಕೊಂಡ ಡಿ.ವಿ., ಕೇಂದ್ರ ಮತ್ತು ರಾಜ್ಯದ ಸರಕಾರದ ವತಿಯಿಂದಾಗುವ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ಇತ್ತರು. ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿ ಸಮಾಧಾನ ಹೇಳಿದರು. ಏಕನಾಥ ಶೆಟ್ಟಿಯವರ ಇಬ್ಬರು ಮಕ್ಕಳಾದ ಆಶಿಕಾ ಹಾಗೂ ಅಕ್ಷಯ್ ಅವರಿಗೆ ಸಮಾಧಾನ, ಧೈರ್ಯ ಹೇಳಿದರು. ಜಯಂತಿಯವರ ಪ್ರಸ್ತುತ ಉದ್ಯೋಗದ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ದೇಶ ಸೇವೆಗೆ ತನ್ನನ್ನು ತಾನು ಮುಡಿಪಾಗಿಟ್ಟುಕೊಂಡ ವೀರ ಯೋಧನನ್ನು ನಾವು ಕಳೆದುಕೊಂಡಿದ್ದೇವೆ. ನಿವೃತ್ತಿಯಾದ ಸಂದರ್ಭದಲ್ಲಿ ವಿವಿಧ ಬ್ಯಾಂಕ್‌ಗಳ ಹುದ್ದೆಗೆ ಆಯ್ಕೆಯಾಗಿದ್ದರೂ ಅದರತ್ತ ಗಮನಹರಿಸದೆ ಮತ್ತೆ ಸೇನೆಗೆ ಸೇರಿ ದೇಶ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ. ಇಂತಹ ಉದಾಹರಣೆ ಸಿಗುವುದು ಅಪೂರ್ವವಾಗಿದೆ ಎಂದರು.

ಬಂಗಾಲಕೊಲ್ಲಿಯಲ್ಲಿ ನಾಪತ್ತೆಯಾಗಿರುವ ವಿಮಾನದ ಕುರುಹು ಇನ್ನೂ ಲಭ್ಯವಾಗಿಲ್ಲ. ಆದರೂ ಕೇಂದ್ರ ಸರಕಾರ ಸರ್ವರೀತಿಯ ಪ್ರಯತ್ನ ನಡೆಸುತ್ತಿದೆ. ಈ ವಿಚಾರದಲ್ಲಿ ನಮ್ಮ ಸರಕಾರ ಯಾವುದನ್ನೂ ಕಡೆಗಣಿಸುವುದಿಲ್ಲ. ಅಮೆರಿಕದಿಂದ ವಿಶೇಷ ಹುಡುಕಾಟದ ತಜ್ಞರನ್ನು ಕರೆಸಿಕೊಳ್ಳಲಾಗಿದೆ ಎಂದರು.

ನಿನ್ನೆಯವರೆಗೆ ಅಧಿವೇಶನ ಇದ್ದುದರಿಂದ ಇಲ್ಲಿಗೆ ಬರಲಾಗಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕರ್ ನಿಮ್ಮ ಊರಿನ ಯೋಧನ ವಿಚಾರದಲ್ಲಿ ಇಡೀ ದೇಶ ಏಕನಾಥ ಶೆಟ್ಟಿ ಅವರ ಕುಟುಂಬದವರೊಂದಿಗೆ ಇದೆ. ದೇಶವನ್ನು, ನಮ್ಮನ್ನು ರಕ್ಷಣೆ ಮಾಡುವ ಯೋಧರ ವಿಚಾರದಲ್ಲಿ ರಕ್ಷಣಾ ಇಲಾಖೆ ನಿಮ್ಮೊಂದಿಗಿದೆ ಎಂದು ತಿಳಿಸಿ ಎಂದು ಹೇಳಿದ್ದಾರಲ್ಲದೆ, ಕೇಂದ್ರ ಸರಕಾರ ಜೊತೆಗಿದೆ ಎಂದು ತಿಳಿಸಿದ್ದಾರೆ ಎಂದರು.

ಸಂತಾಪ

ರಾಜ್ಯದ ಮುಖ್ಯಮಂತ್ರಿ ಪುತ್ರನ ನಿಧನದ ಬಗ್ಗೆ ತೀವ್ರ ಶೋಕ ವ್ಯಕ್ತ ಪಡಿಸಿದ ಡಿ.ವಿ. ಅವರು, ಇದೊಂದು ದುಃಖದ ಸಂಗತಿ. ಮುಖ್ಯಮಂತ್ರಿಯಾದವನು ರಾಜ್ಯದ ಹಿತದ ಜೊತೆಗೆ ಕುಟುಂಬದ ಹಿತದಲ್ಲೂ ಜೊತೆಯಾಗಿರಬೇಕಾಗುತ್ತದೆ. ಇದೊಂದು ದೊಡ್ಡ ದುರಂತ. ಪುತ್ರನನ್ನು ಕಳೆದುಕೊಂಡು ವಿಚಾರದಲ್ಲಿ ನಾನು ಹಾಗೂ ಸಿದ್ದರಾಮಯ್ಯ ಸಮಾನ ದುಃಖಿಗಳು. ಅಪಾರ ಶೋಕದ ನಡುವೆ ಇರುವ ಸಿದ್ಧರಾಮಯ್ಯ ಅವರಿಗೆ ನೆಮ್ಮದಿ ಸಿಗಲಿ. ರಾಕೇಶ್‌ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

ಡಿ.ವಿ. ಭೇಟಿ ಸಂದರ್ಭ ಸಂಸದ ನಳೀನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ಯೋಗಿಶ್ ಭಟ್, ಪ್ರಭಾಕರ ಬಂಗೇರ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೆಶ್ ಚೌಟ, ಕೋಶಾಧಿಕಾರಿ ಸಂಜಯ್ ಪ್ರಭು, ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಮಮತಾ ಶೆಟ್ಟಿ, ತಾಲೂಕು ಅಧ್ಯಕ್ಷ ರಂಜನ್ ಜಿ. ಗೌಡ, ಕಾರ್ಯದರ್ಶಿ ಸೀತಾರಾಮ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಸದಸ್ಯ ಗೋಪಿನಾಥ ನಾಯಕ್, ಮಾಜಿ ಸದಸ್ಯರಾದ ಜಯಂತ ಕೋಟ್ಯಾನ್, ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್, ಸದಸ್ಯರಾದ ವೃಷಭ ಆರಿಗ, ಪುರಂದರ ಶೆಟ್ಟಿ, ಮುಖಂಡರಾದ ಅಶೋಕ್ ರೈ ಪುತ್ತೂರು, ನಾರಾಯಣ ಆಚಾರ್, ಮಾಜಿ ಸೈನಿಕರ ಅಧ್ಯಕ್ಷ ಕಾಂಚೋಡು ಗೋಪಾಲಕೃಷ್ಣ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News