ಅತ್ತೂರು: ಹಳೆ ಆರೋಪಿಗೆ ಮಾರಕಾಯುಧದಿಂದ ಹಲ್ಲೆ

Update: 2016-08-01 17:36 GMT

ಕಾರ್ಕಳ, ಆ.1: ಇಲ್ಲಿನ ಅತ್ತೂರು ದೂಪದಕಟ್ಟೆ ಬಾರ್ ಬಳಿ ಹಳೆ ಪ್ರಕರಣಗಳ ಆರೋಪೊಇಗೆ ಮಾರಕಾಯುಧದಿಂದ ಕಡಿದ ಘಟನೆ ಸೋಮವಾರ ನಡೆದಿದೆ. ಭೂಗತ ಪಾತಕಿಗಳ ಜತೆ ಗುರುತಿಸಿಕೊಂಡ ಅತ್ತೂರು ನಿವಾಸಿ ವಿಲಿಯಂ ಡಿಸೋಜ(45) ಯಾನೆ ವಲ್ಲಿ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ವ್ಯಕ್ತಿ.

ದೂಪದಕಟ್ಟೆ ಬೈದಾಲ್ ನಿವಾಸಿ ಹರೀಶ್ ಪೂಜಾರಿ ಮತ್ತು ಅಣ್ಣಯ್ಯ ಎಂಬವರು ಹಲ್ಲೆ ನಡೆಸಿದ್ದರೆಂದು ವಿಲಿಯಂ ಡಿಸೋಜಾ ಪೋಲಿಸರಿಗೆ ದೂರು ನೀಡಿದ್ದಾರೆ.

ಗಂಭೀರ ಗಾಯಗೊಂಡ ವಿಲಿಯಂ ಡಿಸೋಜನನ್ನು ಸ್ಥಳೀಯರ ನೆರವಿನಿಂದ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ದಾಖಲಿಸಲಾಗಿದೆ. ಹರೀಶ್ ಪೂಜಾರಿ ಸ್ಥಳೀಯ ನಿವಾಸಿಯಾಗಿದ್ದರೆ, ಅಣ್ಣಯ್ಯ ಎಂಬಾತನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ.

ಹಳೆ ದ್ವೇಷ :

 ಹರೀಶ್ ಪೂಜಾರಿ ಟೆಂಪೊ ಚಾಲಕ(ಮಾಲಕ)ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರಲ್ಲಿ ಹರೀಶ್ ಪೂಜಾರಿಗೆ, ವಿಲಿಯಂ ಡಿಸೋಜ ಬೆರಂದೊಟ್ಟು ದ್ವಾರದ ಬಳಿ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಗಂಭೀರ ಗಾಯಗೊಂಡ ಹರೀಶ್ ಆರು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಇದೀಗ ಅದೇ ದ್ವೇಷವನ್ನು ಮುಂದಿಟ್ಟುಕೊಂಡು ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.

ಹರೀಶ್ ಪೂಜಾರಿಗೆ ಹಲ್ಲೆಗೈದ ಪ್ರಕರಣದಡಿ ವಿಲಿಯಂ ಬಂಧಿತನಾಗಿ ಬಳಿಕ ಬಿಡುಗಡೆಗೊಂಡಿದ್ದ. 2016ರ ಮೇ 20ರಂದು ಮನೆಯಲ್ಲಿ ಅಕ್ರಮ ಮಾರಕಾಯುಧ ಸಂಗ್ರಹಿಸಿಟ್ಟ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಗೆ ಆತನ ತಾಯಿ ನೀಡಿದ ದೂರಿನನ್ವಯ ಮತ್ತೆ ಬಂಧಿತನಾಗಿದ್ದ. ಆ ಸಂದರ್ಭ ಆತನಲ್ಲಿದ್ದ ಪಿಸ್ತೂಲ್, ಮದ್ದುಗುಂಡುಗಳು, ಚೂರಿ ಮುಂತಾದ ಮಾರಕಾಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ 15 ದಿನಗಳ ಹಿಂದೆಯಷ್ಟೇ ಹಿರಿಯಡ್ಕ ಜೈಲಿನಿಂದ ಬಿಡುಗಡೆಗೊಂಡಿದ್ದ ವಿಲಿಯಂ ಡಿಸೋಜ ಹಿಂಸೆ, ಕಳ್ಳತನ, ಕಳ್ಳಭಟ್ಟಿ ಮಾರಾಟ, ಜೀವಬೆದರಿಕೆ ಮುಂತಾದ ಸಮಾಜ ಬಾಹಿರ ಕೃತ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News