ಸಾಹಿತ್ಯಕ್ಕೆ ಭಾಷೆಯ ಬಂಧನವಿಲ್ಲ: ಆನಂದ ಮ್ಹಸ್ವೇಕರ್
ಉಡುಪಿ, ಆ.1: ಸಾಹಿತ್ಯಕ್ಕೆ ಭಾಷೆಯ ಬಂಧನ ಎನ್ನುವುದಿಲ್ಲ. ಕನ್ನಡ ಭಾಷೆಯ ಸಾಕಷ್ಟು ಕೃತಿಗಳು ಮರಾಠಿಗೆ ಹಾಗೂ ಮರಾಠಿಯ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕನ್ನಡ ಭಾಷೆಯು ಮರಾಠಿ ಭಾಷೆಗೆ ಅಕ್ಕ, ಅಣ್ಣ, ಅಪ್ಪ ಎಂಬ ಮೂರು ಶಬ್ಧಗಳನ್ನು ನೀಡುವ ಮೂಲಕ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ ಎಂದು ಮರಾಠಿ ನಾಟಕಕಾರ ಆನಂದ ಮ್ಹಸ್ವೇಕರ್ ಹೇಳಿದ್ದಾರೆ.
ತನ್ನ ಮರಾಠಿ ಮೂಲದ ಕನ್ನಡ ಅನುವಾದಿತ ‘ಯೂ ಟರ್ನ್’ ನಾಟಕ ಕೃತಿಯನ್ನು ಮಣಿಪಾಲ ವಿಶ್ವವಿದ್ಯಾನಿಲಯ ಪ್ರೆಸ್ ಆಶ್ರಯದಲ್ಲಿ ಮಣಿಪಾಲದ ಡಾ.ಟಿ.ಎಂ.ಪೈ. ಪ್ಲಾನಿಟೋರಿಯಂ ಕಾಂಪ್ಲೆಕ್ಸ್‌ನಲ್ಲಿರುವ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಸೋಮ ವಾರ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ಸಮಸ್ಯೆಯು ನಿಜವಾಗಿ ಜನರ ಸಮಸ್ಯೆಯಲ್ಲ. ಅದು ರಾಜಕೀಯ ಸಮಸ್ಯೆಯಾಗಿದೆ. ಸಾಹಿತ್ಯಕ್ಕೆ ಗಡಿ ಎಂಬುದಿಲ್ಲ. ಅದು ಅವೆಲ್ಲಕ್ಕಿಂತಲೂ ಮೀರಿ ನಿಲ್ಲುತ್ತದೆ. ಒಂದು ಭಾಷೆಯ ಸಾಹಿತ್ಯವನ್ನು ಇನ್ನೊಂದು ಭಾಷೆಗೆ ಅನುವಾದ ಮಾಡುವುದು ತುಂಬಾ ಕಷ್ಟದ ಕೆಲಸ. ಆ ಸಾಹಿತ್ಯವನ್ನು ಸ್ಥಳೀಯ ಭಾಷೆಯ ಸಂಸ್ಕೃತಿಗೆ ಅನುಗುಣವಾಗಿ ರಚಿಸಬೇಕಾಗುತ್ತದೆ ಎಂದರು.
ತಾನು ರಚಿಸಿರುವ ಎಂಟು ಪುಸ್ತಕಗಳಲ್ಲಿ ‘ಯೂ ಟರ್ನ್ ’ಕೃತಿಯೊಂದೇ ಇತರ ಭಾಷೆಗಳಿಗೆ ಅನುವಾದಗೊಂಡಿರುವುದು. ಮರಾಠಿಯಲ್ಲಿ 585 ಬಾರಿ ಪ್ರದರ್ಶನ ಗೊಂಡಿರುವ ಈ ನಾಟಕವು ಗುಜರಾತಿ, ಹಿಂದಿ ಹಾಗೂ ಈಗ ಕನ್ನಡಕ್ಕೆ ಅನು ವಾದಗೊಂಡಿದೆ ಎಂದು ಅವರು ತಿಳಿಸಿದರು.
ಕೃತಿಯನ್ನು ಕನ್ನಡಕ್ಕೆ ಅನುದಾನ ಮಾಡಿರುವ ಡಾ.ನೀತಾ ಇನಾಂದಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಮಣಿಪಾಲ ವಿವಿಯ ಉಪಕುಲಪತಿ ಡಾ.ವಿನೋದ್ ಭಟ್ ವಹಿಸಿದ್ದರು. ಕೃತಿ ರಚನೆಗೆ ಸಹಾಯ ಮಾಡಿರುವ ಸವಿತಾ ಶಾಸ್ತ್ರಿ ಉಪಸ್ಥಿತರಿದ್ದರು. ಅನಿತಾ ಗುರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರದೀಪ್‌ಚಂದ್ರ ಕುತ್ಪಾಡಿ ನಿರ್ದೇಶನದಲ್ಲಿ ‘ಯೂ ಟರ್ನ್’ ಕನ್ನಡ ನಾಟಕದ ಮೊದಲ ಪ್ರದರ್ಶನ ನಡೆಯಿತು.