ವಿದ್ಯಾರ್ಥಿಗಳಿಗೆ ದೇಶಿಯ ಸಂಸ್ಕೃತಿಯ ಅರಿವು ಅಗತ್ಯ: ಚಂದ್ರಹಾಸ್ ಕರ್ಕೇರ

Update: 2016-08-02 10:59 GMT

ಕೊಣಾಜೆ, ಆ.2: ದೇಶವು ಅಭಿವೃದ್ಧಿ ಹೊಂದುತ್ತಿರುವಂತೆಯೇ ವಿಜ್ಞಾನ ತಂತ್ರಜ್ಞಾನಗಳೂ ಬೆಳೆಯುತ್ತಿವೆ. ಇದರೊಂದಿಗೆ ನಮ್ಮ ಸಂಪ್ರದಾಯ, ದೇಶಿಯ ಸಂಸ್ಕೃತಿಯ ಅರಿವನ್ನು ಇಂದಿನ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಿದೆ. ಇದರೊಂದಿಗೆ ನಮ್ಮ ಸಂಸ್ಕೃತಿಯ ಮಹತ್ವನ್ನು ಅರಿತುಕೊಂಡು ಜೀವನದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಅವರು ಅಭಿಪ್ರಾಯಪಟ್ಟರು.

ಅವರು ನಡುಪದವಿನ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಪಿ.ಎ.ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಆಷಾಢ ಮಾಸ ಎಂಬುದು ತುಂಬಾ ಕಷ್ಟಕರ ಕಾಲವಾಗಿತ್ತು. ಅಲ್ಲದೆ ಈ ಸಮಯದಲ್ಲಿ ನಮ್ಮ ಪೂರ್ವಜರು ಕೆಲವೊಂದು ಆಹಾರ ಪದ್ದತಿಗಳು, ಜೌಷಧೀಯ ಪದಾರ್ಧಗಳ ಬಳಸಿಕೊಂಡು ತಮ್ಮ ಆರೋಗ್ಯವನ್ನು ವೃದ್ದಿಸಿಕೊಳ್ಳುತ್ತಿದ್ದರು. ಅಲ್ಲದೆ ಹಲವಾರು ಆಚರಣೆಗಳೂ ಕೂಡಾ ಇದ್ದವು. ಆದರೆ ಇಂದು ಅವೆಲ್ಲ ಮರೆಯಾಗುತ್ತಿದ್ದು ಇಂತಹ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಹಿಂದಿನ ಕಾಲದ ಜನರ ಬದುಕು, ಆಹಾರ ಪದ್ದತಿ, ಆಚರಣೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ನಮ್ಮ ಭಾರತೀಯ ಸಂಸ್ಕೃತಿ ಎಂಬುದು ಬಹಳ ಶ್ರೀಮಂತವಾದ ಸಂಸ್ಕೃತಿಯಾಗಿದೆ. ನಮ್ಮಲ್ಲಿರುವ ಕೆಲವೊಂದು ಆಚರಣೆಗಳು ಇಂದು ಮರೆಯಾಗುತ್ತಿದ್ದು ಇದನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಪಿ.ಎ.ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಗ್ರಾಮ ಪಂಚಾಯತ್ ಸದಸ್ಯ ನಂದರಾಜ್ ಶೆಟ್ಟಿ ಪಿಜಿನ ಬೈಲು, ಎನ್.ಎಸ್.ನಾಸೀರ್, ಬ್ರೈಟ್ ಶಿಕ್ಷಣ ಸಂಸ್ಥೆಯ ಅಬ್ದುಲ್ ಜಲೀಲ್ ಮೋಂಟುಗೋಳಿ, ಶಾಲಾ ಸಂಸ್ಥಾಪಕ ಅಧ್ಯಕ್ಷ ಇಸ್ಮಾಯಿಲ್, ಉದ್ಯಮಿ ಇಬ್ರಾಹೀಂ ನಡುಪದವು, ಶಾಲಾ ಎಸ್‌ಎಡಿಎಂಸಿ ಅಧ್ಯಕ್ಷ ಸಿ.ಎಂ.ಶರೀಫ್ ಪಟ್ಟೋರಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ದಿನೇಶ್ ನಾಯಕ್ ಅವರು ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಯೌಜಿತ ಡಿಸೋಜ ಸ್ವಾಗತಿಸಿದರು. ಹಿರಿಯ ಶಿಕ್ಷಕ ಮಂಜೇಶ್ ಅವರು ವಂದಿಸಿ, ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News