ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಧರಣಿ

Update: 2016-08-04 18:39 GMT

ಬೈಂದೂರು, ಆ.4: ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿರುವ ಭೂಕಂದಾಯ ಕಾಯ್ದೆ 94ಸಿ ಅರ್ಜಿದಾರರಿಗೆ ಕೂಡಲೇ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಯ ನೇತೃತ್ವದಲ್ಲಿ ಬೈಂದೂರು ವಿಶೇಷ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಮಾತನಾಡಿ, ಸರಕಾರಿ ಜಾಗಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು 94ಸಿ ಕಲಂನಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ಮಂಜೂರು ಮಾಡಬೇಕು. ಫಲಾನುಭವಿಗಳಿಗೆ ತ್ವರಿತವಾಗಿ ಸ್ಥಳ ಮಂಜೂರು ಮಾಡಲು ಪ್ರತಿ ಗ್ರಾಮಕ್ಕೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ, ಪ್ರತಿ ಗ್ರಾಪಂಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಮತ್ತು ಸಾಕಷ್ಟು ಸರ್ವೇಯರನ್ನು ನೇಮಿಸಲು ಕ್ರಮ ವಹಿಸಬೇಕು. ಹಕ್ಕುಪತ್ರ ಮಂಜೂರಾತಿ ಪ್ರಗತಿಯ ಮಾಹಿತಿ ಬಗ್ಗೆ ಕನಿಷ್ಠ 2 ತಿಂಗಳಿಗೊಮ್ಮೆ ಸಭೆಯನ್ನು ಕರೆಯಬೇಕು. ಅರ್ಜಿದಾರ ಫಲಾನುಭವಿಗಳಿಗೆ ಸಂಪೂರ್ಣ ಸ್ಥಳ ಮಂಜೂರು ಮಾಡಬೇಕು. ಕುಮ್ಕಿ, ಗೋಮಾಳ, ಗೋಚ ರಾವು, ರಕ್ಷಿತಾರಣ್ಯ ಇತ್ಯಾದಿ ಕಂದಾಯ ಮೀಸಲು ಸ್ಥಳಗಳಲ್ಲಿ ಮನೆ ಕಟ್ಟಿ ಕುಳಿತ ಅರ್ಜಿದಾರರಿಗೆ ಯಾವುದೇ ಕಾನೂನು ನೆಪ ಹೇಳದೆ ಭೂಮಿ ಹಕ್ಕುಪತ್ರ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಬೈಂದೂರು ವಿಶೇಷ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಸಿಐಟಿಯು ಮುಖಂಡ ಸುರೇಶ್ ಕಲ್ಲಾಗರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News