ಆ.7, 8ರಂದು ಸಜಿಪನಡು ಗ್ರಾಮೋತ್ಸವ - 2016

Update: 2016-08-05 16:13 GMT

ಬಂಟ್ವಾಳ, ಆ.5: ತಾಲೂಕಿನ ಸಜಿಪನಡು ಗ್ರಾಮ ಪಂಚಾಯತ್‌ನ ಗ್ರಾಮೋತ್ಸವ - 2016 ಕಾರ್ಯಕ್ರಮವು ಆ.7ಮತ್ತು 8ರಂದು ಎರಡು ದಿನಗಳ ಕಾಲ ಪಂಚಾಯತ್‌ನ ವಠಾರದಲ್ಲಿ ಜರಗಲಿದೆ ಎಂದು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15 ಹಾಗೂ 15-16ನೆ ಸಾಲಿನಲ್ಲಿ ವಿವಿಧ ಯೋಜನೆಯಡಿ ಬಿಡುಗಡೆಯಾದ 3.20 ಕೋಟಿ ರೂ. ವೆಚ್ಚದಲ್ಲಿ ನಡೆಸಲಾದ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಅನುಷ್ಠಾನಗೊಳಿಸಲಾದ ಕಾಂಕ್ರಿಟ್‌ಕರಣಗೊಂಡ ರಸ್ತೆ, ತಡೆಗೋಡೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದರು.

ಆ.7ರಂದು ಗ್ರಾಮೋತ್ಸವದ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ, ಹಿಜಾಮ ಚಿಕಿತ್ಸೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಆ. 8ರಂದು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಜೊತೆಗೆ ಕಳೆದ ಒಂದು ವರ್ಷದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ಆಡಳಿತ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಚಿಕೆಯ ಬಿಡುಗಡೆ, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ ಸೇರಿದಂತೆ ಪಂಚಾಯತ್‌ನ ಮಾಜಿ ಅಧ್ಯಕ್ಷರನ್ನು ಇದೇ ವೇಳೆ ಸನ್ಮಾನಿಸಲಾಗುವುದು. ಮಧ್ಯಾಹ್ನದ ಬಳಿಕ ಬಹುಭಾಷಾ ಕವಿಗೋಷ್ಠಿಯು ನಡೆಯಲಿದೆ ಎಂದರು.

ಸಚಿವ ಯು.ಟಿ.ಖಾದರ್, ವಿ.ಪ. ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಕಡೂರು ಶಾಸಕ ವೈ.ಎಸ್.ವಿ.ದತ್ತಾ, ಬೆಂಗಳೂರು ಬಿಬಿಎಂಪಿಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಜಾಹಿದ್ ಪಾಷ ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನದ ಬಳಿಕ ನಡೆಯುವ ಬಹುಬಾಷಾ ಕವಿಗೋಷ್ಠಿಯಲ್ಲಿ ದಯಾನಂದ ಕತ್ತಲ್‌ಸಾರ್, ರೂಪಕಲಾ ಆಳ್ವ, ಬಶೀರ್ ಕಿನ್ಯ, ಮಹೇಂದ್ರನಾಥ್ ಸಾಲೆತ್ತೂರು, ದೇವಿಕಾ ನಾಗೇಶ್, ಎಡ್ವರ್ಡ್ ರೆಡಿಯೋ ಸಾರಂಗ್, ರಾಜರಾಮ ವರ್ಮ ವಿಟ್ಲ, ಶಂಶೀರ್ ಬುಡೋಲಿ, ಶಾಹುಲ್ ಹಮೀದ್ ತುಂಬೆ, ಶಮೀವ್ ಕುಟ್ಟಿಕಲ, ಮುಹಾದ್ ಗೋಳ್ತಮಜಲು ಕವಿಗಳಾಗಿ ಬಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಮಾತಿಗೆ ಬದ್ಧ:

ಸಜಿಪನಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ಪದವು ಎಂಬಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕವು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಹಾಗೂ ಪಂಚಾಯತ್‌ಗೆ ಖಚಿತ ಪಡಿಸುವವರೆಗೂ ನಮ್ಮ ವಿರೋಧವಿದೆ ಎಂದು ಅಧ್ಯಕ್ಷ ಮುಹಮ್ಮದ್ ನಾಸಿರ್ ಪುನರುಚ್ಚರಿಸಿದ್ದಾರೆ.

ಘನತ್ಯಾಜ್ಯ ವಿಲೇವಾರಿ ಘಟಕದ ಅಕ್ಕಪಕ್ಕದಲ್ಲಿರುವ ಮನೆಗಳು, ಶಾಲೆ, ಅಂಗನವಾಡಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ವರೆಗೂ ಘಟಕ ನಿರ್ಮಾಣಕ್ಕೆ ತಮ್ಮ ವಿರೋಧವಿದೆ. ಪ್ರಸಕ್ತ ಘನತ್ಯಾಜ್ಯ ಘಟಕದ ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿಸಿದ ಅವರು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಮಂಗಳೂರು ಸಹಾಯಕ ಕಮೀಷನರ್ ಅವರು ಕಾಮಗಾರಿ ಪ್ರಗತಿಯಲ್ಲಿದೆ ಮುಂದಿನ ಮೂರು ತಿಂಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ನಾಸಿರ್ ಉತ್ತರಿಸಿದರು.

ಪುರಸಬೆಯಾಗಲೀ, ಸಹಾಯಕ ಕಮಿಷನರ್ ಆಗಲಿ, ಜಿಲ್ಲಾಡಳಿತವಾಗಲೀ ಈ ತ್ಯಾಜ್ಯ ಘಟಕಕ್ಕೆ ಸಂಬಂಧಿಸಿದಂತೆ ಪಂಚಾಯತ್‌ನೊಂದಿಗೆ ಈವರೆಗೂ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೈಲಗುತ್ತು, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News