ನಾಳೆ ಸಜಿಪನಡು ಗ್ರಾಪಂ ‘ಗ್ರಾಮೋತ್ಸವ-2016’ ಕಾರ್ಯಕ್ರಮ

Update: 2016-08-05 18:51 GMT

ಬಂಟ್ವಾಳ, ಆ.5: ತಾಲೂಕಿನ ಸಜಿಪನಡು ಗ್ರಾಪಂನ ಗ್ರಾಮೋತ್ಸವ - 2016 ಕಾರ್ಯಕ್ರಮವು ಆ.7 ಮತ್ತು 8ರಂದು ಪಂಚಾಯತ್‌ನ ವಠಾರದಲ್ಲಿ ಜರಗಲಿದೆ ಎಂದು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸಿರ್ ತಿಳಿಸಿದ್ದಾರೆ. ಬಿ.ಸಿ.ರೋಡ್‌ನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ 2014-15 ಹಾಗೂ 15-16ನೆ ಸಾಲಿನಲ್ಲಿ ವಿವಿಧ ಯೋಜನೆಯಡಿ ಬಿಡುಗಡೆಯಾದ 3.20 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾದ ಕಾಂಕ್ರಿಟೀಕರಣಗೊಂಡ ರಸ್ತೆ, ತಡೆಗೋಡೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದರು. ಆ.7ರಂದು ಗ್ರಾಮೋತ್ಸವದ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಆ.8ರಂದು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಜೊತೆಗೆ ಕಳೆದ ವರ್ಷದಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸ ಆಡಳಿತ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಂಚಿಕೆ ಬಿಡುಗಡೆ, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ ಸೇರಿದಂತೆ ಪಂಚಾಯತ್‌ನ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನದ ಬಳಿಕ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ ಎಂದರು. ಮಾತಿಗೆ ಬದ್ಧ: ಸಜಿಪನಡು ಗ್ರಾಪಂ ವ್ಯಾಪ್ತಿಯ ಕಂಚಿನಡ್ಕ ಪದವು ಎಂಬಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರಿಗೆ ಹಾಗೂ ಪಂಚಾಯತ್‌ಗೆ ಖಚಿತ ಪಡಿಸುವವರೆಗೂ ನಮ್ಮ ವಿರೋಧವಿದೆ ಎಂದು ಅಧ್ಯಕ್ಷ ಮುಹಮ್ಮದ್ ನಾಸಿರ್ ಪುನರುಚ್ಚರಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿ ಘಟಕದ ಅಕ್ಕಪಕ್ಕದಲ್ಲಿರುವ ಮನೆಗಳು, ಶಾಲೆ, ಅಂಗನವಾಡಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಘಟಕ ನಿರ್ಮಾಣಕ್ಕೆ ವಿರೋಧವಿದ್ದು, ಪ್ರಸಕ್ತ ಘನತ್ಯಾಜ್ಯ ಘಟಕದ ಕಾಮಗಾರಿ ಸ್ಥಗಿತಗೊಂಡಿದೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪಂಚಾಯತ್ ಸದಸ್ಯರಾದ ಇಕ್ಬಾಲ್ ಬೈಲಗುತ್ತು, ಅಬ್ದುಲ್ ರಶೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News