ರಾಜಸ್ಥಾನದಲ್ಲಿ ಅಪಹರಣಕ್ಕೊಳಗಾಗಿದ್ದ ಯುವಕನ ಪ್ರಾಣ ಉಳಿಸಿದ್ದು ಕೋಡ್‌ವರ್ಡ್!

Update: 2016-08-06 14:07 GMT

ರಾಜಸ್ತಾನದಲ್ಲಿ ಅಪಹರಣಕ್ಕೊಳಗಾಗಿದ್ದ ರಿಚರ್ಡ್ ಮಂಗಳೂರು,ಆ.6: ‘‘ಅಪಹರಣಕಾರರು ನನ್ನ ಮೊಬೈಲ್‌ನಿಂದಲೇ ಕರೆ ಮಾಡಲು ತಿಳಿಸಿದ ವೇಳೆ ನಾನು ಅರಣ್ ಎಂಬವರಿಗೆ ಕರೆ ಮಾಡಿ ಕೋಡ್ ವರ್ಡ್‌ನಲ್ಲಿ ನಾನು ಅಪಾಯದಲ್ಲಿರುವ ಬಗ್ಗೆ ಸೂಚ್ಯವಾಗಿ ತಿಳಿಸಿದ ಪರಿಣಾಮ ಅವರು ಅದನ್ನು ಅರ್ಥಮಾಡಿಕೊಂಡು ಮುಂದಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನಾನು ಜೀವಂತವಾಗಿ ಬರುವಂತಾಯಿತು.’’

ಇತ್ತೀಚೆಗೆ ರಾಜಸ್ತಾನದ ಭರತ್‌ಪುರದಲ್ಲಿ ಹಾತಿಯಾ ಎಂಬ ಗ್ರಾಮದಲ್ಲಿ ಅಪಹರಣಕ್ಕೊಳಗಾಗಿ ಸಚಿವ ಯು.ಟಿ.ಖಾದರ್‌ರ ನೆರವು, ನಗರ ಪೊಲೀಸರ ಕಾರ್ಯದಕ್ಷತೆ ಹಾಗೂ ರಾಜಸ್ತಾನ ಪೊಲೀಸರ ಸಹಕಾರದೊಂದಿಗೆ ಬಂಧನಮುಕ್ತಗೊಂಡು ಮಂಗಳೂರಿಗೆ ಬಂದಿರುವ ರಿಚರ್ಡ್ ವಲೇರಿಯನ್ ಲಾಝರಸ್ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

‘ಜನರೇಟರ್ ಟೆಕ್ನೀಶಿಯನ್ ವೃತ್ತಿ ಮಾಡುವ ನನ್ನನ್ನು ಅರುಣ್ ಡಿಸೋಜಾರವರು ರಾಜಸ್ತಾನದಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುವ ನಾಲ್ಕು ಜನರೇಟರ್‌ಗಳನ್ನು ನೋಡಿ ಬರುವಂತೆ ಕಳುಹಿಸಿದ್ದರು. ಜುಲೈ 30ರಂದು ನಾನು ರಾಜಸ್ತಾನದ ಭರತ್‌ಪುರ ತಲುಪಿದ್ದೆ. ಜನರೇಟರ್ ಮಾರಾಟ ಮಾಡುವವರು ತಿಳಿಸಿದ್ದ ಜಾಗದಲ್ಲಿ ವ್ಯಕ್ತಿಯೊಬ್ಬ ಪಿಕಪ್ ವಾಹನದಲ್ಲಿ ಬಂದು ಜನರೇಟರ್ ಕೊಡಿಸುವುದಾಗಿ ಕರೆದೊಯ್ದರು. ತುಂಬಾ ಆತ್ಮೀಯವಾಗಿ ಅರುಣ್ ಅವರು ಹೇಳಿದ ರೀತಿಯಲ್ಲೇ ಜನರೇಟರ್ ವಿಷಯದಲ್ಲಿ ಆ ವ್ಯಕ್ತಿ ಮಾತನಾಡಿದ್ದರಿಂದ ಯಾವುದೇ ಅನುಮಾನವಿಲ್ಲದೆ ಗಾಡಿ ಹತ್ತಿದ್ದೆ. ಆದರೆ, ಅವರು ಅಲ್ಲಿಂದ ಸುಮಾರು 40 ಕಿ.ಮೀ. ದೂರದ ಅಜ್ಞಾತ ಸ್ಥಳವೊಂದಕ್ಕೆ ನನ್ನನ್ನು ಕರೆದೊಯ್ದು, ಗದ್ದೆಯಲ್ಲಿ ಕಟ್ಟಿ ಹಾಕಿದ್ದರು. ಸುಮಾರು ನಾಲ್ಕು ದಿನಗಳ ಕಾಲ ಮಳೆಯಲ್ಲಿ ನೆನೆಯುತ್ತಾ, ಹಾಕಿದ್ದ ಬಟ್ಟೆಯಲ್ಲೇ ನಾನು ಇರಬೇಕಾಯಿತು. ನೀರು ಕೊಡುತ್ತಿದ್ದರು. ರೊಟ್ಟಿ ತೆರನಾದ ದಪ್ಪದ ಆಹಾರವನ್ನು ಅವರು ತಿನ್ನುತ್ತಿದ್ದು, ಅದನ್ನು ನನಗೆ ತಿನ್ನಲು ಹೇಳಿದರೂ ಅದು ತಿನ್ನಲಾಗಲಿಲ್ಲ. ಹಾಗಾಗಿ ನಾಲ್ಕು ದಿನ ನಾನು ಹಸಿವಿನಲ್ಲೇ ಇರಬೇಕಾಯಿತು. ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ತುಳು ಅವರಿಗೆ ಗೊತ್ತಿರಲಿಲ್ಲ. ನನ್ನ ಫೋನ್‌ನಲ್ಲಿ ನಾನು ಮಾತನಾಡಿ ನಿನ್ನನ್ನು ಕಳುಹಿಸಿದವರಿಗೆ ಕಿಡ್ನಾಪ್ ಆಗುವ ವಿಷಯ ತಿಳಿಸಿ, 10 ಲಕ್ಷ ರೂ. ನೀಡುವಂತೆ ಹೇಳು ಎಂದರು. ನಾನು ಅರುಣ್ ಅವರಿಗೆ ಕರೆ ಮಾಡಿ ತುಳುವಿನಲ್ಲಿ ಕೆಲವೊಂದು ಸೂಚ್ಯ ಮಾತುಗಳಲ್ಲಿ ನಾನು ಅಪಹರಣಕ್ಕೊಳಗಾಗಿರುವ ವಿಷಯವನ್ನು ತಿಳಿಸಿದೆ’’ ಎಂದು ರಿಚರ್ಡ್ ಘಟನೆಯ ವಿವರ ನೀಡಿದರು.

‘‘ಅಪಹರಣಕಾರರ ತಂಡದಲ್ಲಿ ಎಂಟರಿಂದ 10 ಮಂದಿ ಇದ್ದಿರಬಹುದು. ಬಳಿಕ ನನ್ನನ್ನು ಗದ್ದೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ನನ್ನ ಸುತ್ತಮುತ್ತ ಕೆಲವೊಮ್ಮೆ ಮೂರು ಅಥವಾ ನಾಲ್ಕು ಮಂದಿ ಇರುತ್ತಿದ್ದರು. ಅವರ ಬಳಿ ಬಂದೂಕು, ಚೂರಿ ಮೊದಲಾದ ಮಾರಕಾಸ್ತ್ರಗಳಿದ್ದವು. ಘಟನೆಯಿಂದ ನಾನಂತೂ ತೀರಾ ನಿಸ್ತೇಜನಾಗಿದ್ದೆ. ಅಲ್ಲಿಂದ ಬಂದು ಚೇತರಿಸಿಕೊಳ್ಳಲು ಎರಡು ದಿನಗಳೇ ಬೇಕಾಯಿತು. ಸಚಿವ ಯು.ಟಿ.ಖಾದರ್, ಪೊಲೀಸ್ ಆಯುಕ್ತ ಚಂದ್ರಶೇಖರ್, ಡಿಸಿಪಿ ಶಾಂತರಾಜು, ಎಎಸ್‌ಐ ವಿಜಯ ರಾಜು ಅವರಿಗೆ ನಾನು ಕೃತಜ್ಞ’’ ಎಂದು ರಿಚರ್ಡ್ ನುಡಿದರು.

‘‘ರಿಚರ್ಡ್ ಕರೆ ಮಾಡಿದಾಗ ಅವರು ತುಳುವಿನಲ್ಲಿ ಕೆಲವೊಂದು ಪದಗಳನ್ನು ಅತ್ಯಂತ ಸೂಚ್ಯವಾಗಿ ಹೇಳಿದಾಗ ಅವರು ಅಪಾಯದಲ್ಲಿರುವುದು ಅರಿವಾಯಿತು. ಅಪಹರಣಕಾರರ ಜತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಜತೆ ಆತ್ಮೀಯವಾಗಿ ಮಾತನಾಡುತ್ತಾ, ನಾನು 5 ಲಕ್ಷ ರೂ.ಗಳನ್ನು ತಕ್ಷಣ ಕಳುಹಿಸುತ್ತೇನೆ. ಅದಕ್ಕಾಗಿ ಫ್ಲೈಟ್ ಟಿಕೆಟ್ ಮಾಡಿರುವುದಾಗಿ ಡಮ್ಮಿ ಟಿಕೆಟ್ ಪ್ರತಿಯನ್ನು ವಾಟ್ಸಾಪ್ ಮೂಲಕ ಕಳುಹಿಸಿದೆ. ಬಳಿಕ ವಿಷಯವನ್ನು ಯುವ ಕಾಂಗ್ರೆಸ್‌ನ ಪವನ್‌ರಾಜ್ ಕೊಲ್ಯ ಹಾಗೂ ಪ್ರಕಾಶ್ ಪಿಂಟೋ ಅವರಿಗೆ ತಿಳಿಸಿದೆ. ಅವರು ತಕ್ಷಣ ಸಚಿವ ಯು.ಟಿ.ಖಾದರ್‌ರನ್ನು ಭೇಟಿಯಾಗಿ ವಿಷಯ ತಿಳಿಸಿದರು. ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ವಿಷಯ ಮುಟ್ಟಿಸಿದರು. ನಾನು ಆಯುಕ್ತರಿಗೆ ಲಿಖಿತ ದೂರನ್ನೂ ನೀಡಿದೆ. ಪೊಲೀಸ್ ಆಯುಕ್ತ ಚಂದ್ರಶೇಖರ್ ನಿರ್ದೇಶನದ ಮೇರೆಗೆ ನಗರದ ಪೊಲೀಸರು ಪವನ್ ರಾಜ್ ಹಾಗೂ ಪ್ರಕಾಶ್ ಪಿಂಟೋ ಜತೆ ದಿಲ್ಲಿಗೆ ತೆರಳಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಜಸ್ತಾನದ ಭರತ್‌ಪುರದಲ್ಲಿ ಅಲ್ಲಿನ ಐಜಿಪಿ ಅಲೋಕ್ ವಸಿಷ್ಠರ ಜತೆ ಮಾತನಾಡಿ ವಿಶೇಷ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ’’ ಎಂದು ಅರುಣ್ ಡಿಸೋಜಾ ತಿಳಿಸಿದರು.

   
ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಜನರೇಟರ್‌ಗಳಿವೆ ಎಂಬ ಇಂಟರ್‌ನೆಟ್ ಜಾಹೀರಾತಿನ ಮೇರೆಗೆ ಬಂದ ಕರೆಯನ್ನು ಆಧರಿಸಿ ನಾನು ರಿಚರ್ಡ್‌ರನ್ನು ರಾಜಸ್ತಾನಕ್ಕೆ ಕಳುಹಿಸಿದ್ದೆ ಎಂದು ಅರುಣ್ ಹೇಳಿದರು. ಉತ್ತರ ಪ್ರದೇಶ ಮತ್ತು ರಾಜಸ್ತಾನದ ಗಡಿಭಾಗವಾದ ಹಾತಿಯಾ ಎಂಬಲ್ಲಿ ರಾತ್ರೋರಾತ್ರಿ ಪೊಲೀಸರು 20 ಪೊಲೀಸ್ ವಾಹನಗಳು, ಸಶಸ್ತ್ರ ಪಡೆಯ ಜತೆ ದಾಳಿ ಹಾತಿಯಾ ಎಂಬಲ್ಲಿಗೆ ದಾಳಿ ನಡೆಸಿ ಅಲ್ಲಿನ ಕ್ರಿಮಿನಲ್ ಮುಬಾರಕ್ ಮತ್ತು ಆತನನ ಸಹಚರರನ್ನು ಬಂಧಿಸಿದರು. ಈ ವಿಷಯ ತಿಳಿದು ಅಪಹರಣಕಾರರು, ಪೊಲೀಸರು ತಮ್ಮನ್ನೂ ಬಂಧಿಸಬಹುದೆಂದು ಅರಿತು ರಿಚರ್ಡ್‌ನನ್ನು ಬಿಡುಗಡೆಗೊಳಿಸಿದ್ದರು. ಈ ಮೂಲಕ ರಿಚರ್ಡ್‌ನನ್ನು ರಕ್ಷಿಸಿದ ಪೊಲೀಸರು ಬಂಧನದಲ್ಲಿದ್ದ ವೇಳೆ ರಿಚ್ಚರ್ಡ್‌ನಿಂದಲೇ ಪೋನ್ ಮೂಲಕ ಹಣ ಹಾಕಲು ತಿಳಿಸಿದ್ದ್ದ ಅಕೌಂಟ್ ನಂಬರ್, ಹೆಸರು, ವಿಳಾಸ ಪತ್ತೆ ಹಚ್ಚಿ, ಕರ್ನಾಟಕದ ಪೊಲೀಸರು, ರಾಜಸ್ತಾನ ಹಾಗೂ ಉತ್ತರ ಪ್ರದೇಶದ ಪೊಲೀಸರೊಂದಿಗೆ ದಾಳಿ ಮಾಡಿ ಮೆಹಮೂದ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ಪವನ್ ರಾಜ್ ತಿಳಿಸಿದರು.

ಗೋಷ್ಠಿಯಲ್ಲಿ ಪ್ರಕಾಶ್ ಪಿಂಟೋ, ಪೆರ್ಮನ್ನೂರು ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ನವೀನ್ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News