ಮುಲ್ಕಿ: ಕಾರುಗಳ ಮುಖಾಮುಖಿ ಢಿಕ್ಕಿ: ಆರು ಮಂದಿಗೆ ಗಾಯ

Update: 2016-08-07 18:09 GMT

 ಮುಲ್ಕಿ, ಆ.7: ರಾ.ಹೆ.66ರ ಮುಲ್ಕಿ ಸಮೀಪದ ಕೊಲ್ನಾಡು ಸೇತುವೆ ಬಳಿ ಶನಿವಾರ ರಾತ್ರಿ 12 ಗಂಟೆಗೆ ಎರಡು ಕಾರುಗಳ ಮುಖಾಮುಖಿ ಢಿಕ್ಕಿಯಿಂದ ಆರು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮಾರುತಿ ಓಮ್ನಿಯಲ್ಲಿದ್ದ ಬಂಟ್ವಾಳ ತಾಲೂಕಿನ ಫಾಝಿಲ್ ಪರ್ತಿಪ್ಪಾಡಿ ವಿಟ್ಲ, ಅಬ್ದುರ್ರ ಝಾಕ್ ಕಡಂಬೋಡಿ, ಮುಹಮ್ಮದ್ ಅಲಿ ಸಜಿಪನಡು, ಇಬ್ರಾಹೀಂ ಕಡಂಬು ಹಾಗೂ ಸುರತ್ಕಲ್ ಸಮೀಪದ ರಮೀಝ್ ಚೊಕ್ಕಬೆಟ್ಟು ಹಾಗೂ ಇನ್ನೊಂದು ಕಾರಿನಲ್ಲಿದ್ದ ಉಡುಪಿಯ ಜ್ಯೋತಿ ಕೆ. ಎಂದು ಗುರುತಿಸಲಾಗಿದೆ.
ಸ್ಥಳೀಯ ಬ್ಯಾರಿ ಹಾಡುಗಾರರಾಗಿ ಗುರುತಿಸಿಕೊಂಡಿರುವ ಈ ತಂಡವುಹಳೆಯಂಗಡಿ ಸಮೀಪದ ಕನ್ನಂಗಾರ್‌ನಲ್ಲಿ ನಡೆದ ಮದರಂಗಿ ಸಮಾರಂಭ ವೊಂದರಲ್ಲಿ ಹಾಡುಗಾರಿಕೆ ನಡೆಸಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಹಾಡುಗಾರರಿದ್ದ ಓಮ್ನಿ ಕಾರು ಹಾಗೂ ಮಂಗಳೂರಿನಿಂದ ಮಣಿಪಾಲಕ್ಕೆತೆರಳುತ್ತಿದ್ದ ಕೆ.ಎ.21 ಎನ್ 2990 ಸಂಖ್ಯೆಯ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆಓಮ್ನಿ ಕಾರಿ ಪಲ್ಟಿಯಾಗಿದ್ದು, ಅದರಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಉಳಿದ ವರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಕಾರಿನಲ್ಲಿದ್ದವರಿಗೂ ಅಲ್ಪಪ್ರಮಾಣದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
 ರಾ.ಹೆ. 66 ರ ಕೊಲ್ನಾಡು ಬಳಿ ಕಳೆದ 4 ದಿನಗಳಿಂದ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಯಾವುದೇ ಮುನ್ಸೂಚನಾ ಫಲಕಗಳನ್ನು ಅಳವಡಿಸದೆ ವಾಹನಗಳನ್ನು ದ್ವಿಮುಖ ರಸ್ತೆಯಲ್ಲಿ ಬಿಡಲಾಗುತ್ತಿದೆ. ಹಾಗಾಗಿ ಇಲ್ಲಿ ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿದೆ. ಒಟ್ಟಾರೆ ಇತ್ತೀಚೆಗೆ ನಡೆದ ನಾಲ್ಕನೇ ಅಪಘಾತ ಇದೆಂದು ಸ್ಥಳೀಯರು ತಿಳಿಸಿದ್ದಾರೆ.
=ಸಂಚಾರ ಬಂದ್: ಅಪಘಾತ ನಡೆದು ಓಮ್ನಿ ಕಾರು ರಸ್ತೆಯ ಮಧ್ಯೆ ಪಲ್ಟಿಯಾಗಿತ್ತು. ಮತ್ತೊಂದು ಕಾರು ರಸ್ತೆಯ ಮಧ್ಯ ಭಾಗದಲ್ಲಿ ನಿಂತಿತ್ತು. ಸ್ಥಳೀಯರು ಕಾರುಗಳ ಅಡಿಯಲ್ಲಿದ್ದವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಅಲ್ಲದೆ ಪೊಲೀಸರು 45 ನಿಮಿಷ ತಡವಾಗಿ ಬಂದದ್ದರಿಂದ ಸಂಚಾರ ಸ್ಥಗಿತಗೊಂಡು ಸುಮಾರು 2 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News