ಸರಕಾರಗಳ ಜನವಿರೋಧಿ ನೀತಿ ವಿರುದ್ಧ ಸಿಪಿಎಂ ಪ್ರತಿಭಟನೆ

Update: 2016-08-07 18:43 GMT

ಮಂಗಳೂರು, ಆ.7: ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಭ್ರಷ್ಟಾಚಾರ ವಿರುದ್ಧ ಸಿಪಿಎಂನ ಉರ್ವಾಸ್ಟೋರ್, ಬೋಳೂರು, ದೇರೆಬೈಲು ಸಂಕೇಶ ವಿಭಾಗ ಸಮಿತಿಯು ಉರ್ವಸ್ಟೋರ್ ಮಾರ್ಕೆಟ್ ಮುಂಭಾಗ ಇತ್ತೀಚೆಗೆ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ದೇಶದ ಜನರ ಪಾಲಿಗೆ ಅಚ್ಛೇ ದಿನ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ, ಬೆಲೆ ಏರಿಕೆಯ ಆಡಳಿತವನ್ನು ನೀಡುತ್ತಿದೆ. ಸಾಮಾನ್ಯ ಜನರ ಮೇಲೆ ವಿಪರೀತ ಸೇವಾ ತೆರಿಗೆ, ಸ್ವಚ್ಛ ಭಾರತ ತೆರಿಗೆ ಮತ್ತು ಕೃಷಿ ಕಲ್ಯಾಣ ತೆರಿಗೆ ಹಾಕಿ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.

ಅದೇ ತೆರನಾಗಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸಹ ಕೇಂದ್ರ ಸರಕಾರದ ಹಾದಿಯಲ್ಲೇ ನಡೆಯುತ್ತಿದ್ದು, ಬಂಡವಾಳಗಾರರಿಗೆ, ಕೈಗಾರಿಕೋದ್ಯಮಿಗಳಿಗೆ ಮಣೆ ಹಾಕುತ್ತಿದೆಯೇ ಹೊರತು ಬಡವರಿಗೆ, ರೈತರಿಗೆ ಮತ್ತು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಶ್ರೀಯಾನ್ ವಹಿಸಿದ್ದರು.

 ಪ್ರತಿಭಟನಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯ ಸಂತೋಷ್ ನೀತಿನಗರ ಮತ್ತು ಉರ್ವಾಸ್ಟೋರ್, ಬೋಳೂರು, ದೇರೆಬೈಲು ಸಂಕೇಶ, ವಿಭಾಗಗಳ ಹೋರಾಟ ಸಮಿತಿಯ ಸಹ ಸಂಚಾಲಕ ಉಮಾಶಂಕರ್, ಸ್ಥಳೀಯ ಮುಖಂಡರಾದ ಮನೋಜ್, ಕಿಶೋರ್, ನಾಗೇಂದ್ರ, ಇಕ್ಬಾಲ್, ಧನರಾಜ್, ಪ್ರಭಾವತಿ, ಪ್ರಶಾಂತ್, ದಿನೇಶ್ ಉಪಸ್ಥಿತರಿದ್ದರು.

ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News