ಪರಿಸರ ಉಳಿಸಲು ಅರಣ್ಯ ರಕ್ಷಿಸಬೇಕಿದೆ: ಸಚಿವ ರೈ

Update: 2016-08-08 15:21 GMT

ವಿಟ್ಲ, ಆ.8: ಮುಂದಿನ ವರ್ಷದಿಂದ ರಾಜ್ಯದ ಪ್ರತೀ ಗ್ರಾಮ ಪಂಚಾಯತ್‌ಗಳು ಕನಿಷ್ಠ 5 ಸಾವಿರ ನರ್ಸರಿ ಗಿಡಗಳನ್ನು ಬೆಳೆಸುವಂತೆ ಈಗಾಗಲೇ ಸರಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೋಟಿ ವೃಕ್ಷ ಆಂದೋಲನ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸುವ ಮೂಲಕ 25 ಲಕ್ಷ ಗಿಡಗಳನ್ನು ಸಿದ್ದಪಡಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಬಿ.ಸಿ.ರೋಡ್ ಸಮೀಪದ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಅರಣ್ಯ ಇಲಾಖೆ ಮಂಗಳೂರು ವಿಭಾಗ ಬಂಟ್ವಾಳ ವಲಯ, ತಾ.ಪಂ. ಬಂಟ್ವಾಳ, ಪುರಸಭೆ ಬಂಟ್ವಾಳ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಬಂಟ್ವಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕೋಟಿ ವೃಕ್ಷ ಆಂದೋಲನ ವನಮಹೋತ್ಸವ 2016 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಭಯ ಹುಟ್ಟಿಸುವಂತಿದೆ. ಜೀವ ಜಲ, ಜೀವ ವೈವಿಧ್ಯವನ್ನು ಉಳಿಸಿಕೊಂಡು ಪರಿಸರವನ್ನು ರಕ್ಷಿಸಿಕೊಳ್ಳಬೇಕಾಗಿದೆ. ವನ್ಯ ಜೀವಿಗಳನ್ನು ರಕ್ಷಿಸಿಕೊಳ್ಳುವ ಅವಶ್ಯವಿದೆ. ವನ್ಯಜೀವಿ ಸಂರಕ್ಷಣೆ ಮತ್ತು ಅರಣ್ಯ ಸಂರಕ್ಷಣೆ ಕಾಯ್ದೆ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಕಾಲದಲ್ಲೇ ಅನುಷ್ಠಾನಕ್ಕೆ ಬಂದಿದೆ. ಅದರ ಬಳಿಕ ಅರಣ್ಯ ಒತ್ತುವರಿ, ಅನ್ಯ ಉದ್ದೇಶಕ್ಕೆ ಬಳಕೆಯ ಚಟುವಟಿಕೆಗೆ ನಿಯಂತ್ರಣ ಜಾರಿಗೆ ಬಂದಿದೆ ಎಂದರು.

ಪ್ರೌಢ ಶಾಲಾ ಮಕ್ಕಳಿಗೆ ಚಿಣ್ಣರ ವನ ದರ್ಶನ, ಹಸಿರು ಶಾಲೆ, ಹಸಿರು ಗ್ರಾಮ, ಸಿರಿಚಂದನ ವನ, ದೈವೀ ವನ, ಪಡುಮಲೆಯಲ್ಲಿ ದೇಯಿ ಬೈದೆತಿ ಔಷಧಿ ವನ ಯೋಜನೆಗಳ ಮೂಲಕ ವಿವಿಧ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಆಗುತ್ತಿದೆ. ಹೊಸದಾಗಿ ಗಿಡ ನೆಟ್ಟು ಉಳಿಸಿ ಬೆಳೆಸಿ ಪಾಪ ಮುಕ್ತರಾಗಿ ಎಂಬ ಕಾರ್ಯಕ್ರಮದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಗಿಡ ನೆಡುವ ಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದ ಸಚಿವ ರೈ, ಪ್ಲಾಸ್ಟಿಕ್ ನಿಷೇಧ ಮಾಡಿರುವ ಏಕಮೇವ ರಾಜ್ಯ ಕರ್ನಾಟಕ, ಜಾನುವಾರುಗಳ ರಕ್ಷಣೆಗಾಗಿ ಪ್ಲಾಸ್ಟಿಕ್ ನಿಷೇಧ, ಉತ್ಪಾದನೆ, ಸಾಗಣೆಯನ್ನು ಸಂಪೂರ್ಣ ನಿಷೇಧಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ರಾಜ್ಯವಾಗಿ ಮಾಡಲಾಗಿದೆ ಎಂದರು.

ಬುಡಾ ಅಧ್ಯಕ್ಷ ಪಿಯೂಸ್ ಎಲ್. ರೊಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ತುಳು ಕಲಾವಿದ ನವೀನ್ ಡಿ. ಪಡೀಲ್, ವಿಶ್ವನಾಥ ಎಂ. ವೀರಕಂಭ, ಪ್ರಕಾಶ್ ಕುಮಾರ್ ರಾಯಿ, ವಿಶ್ವನಾಥ ಪೂಜಾರಿ, ಸ್ನೇಕ್ ಕಿರಣ್ ವಗ್ಗ, ಸಂದೀಪ್ ಶೆಟ್ಟಿ ಸುರತ್ಕಲ್, ಶೀತಲ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಂಗೀತಗಾರ್ತಿ ಸೌಮ್ಯಾ ಭಟ್ ಅವರಿಗೆ ಸ್ಮರಣಿಕೆ ನೀಡಲಾಯಿತು.

ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಎಂ.ಎಸ್. ಮುಹಮ್ಮದ್, ಮಮತಾ ಡಿ.ಎಸ್. ಗಟ್ಟಿ, ಮಂಜುಳಾ ಮಾವೆ, ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಡಿಸಿಸಿ ಉಪಾಧ್ಯಕ್ಷ ಬಿ.ಎಚ್. ಖಾದರ್, ರೋಟರಿ ಕ್ಲಬ್ ಅಧ್ಯಕ್ಷ ರಿತೇಶ್ ಬಾಳಿಗ, ಲಕ್ಷ್ಮಣ ಕುಲಾಲ್, ಗೇರು ನಿಗಮದ ಅಧ್ಯಕ್ಷ ಜಗದೀಶ ಕೊಯಿಲ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ನಾಕ್, ತಹಶೀಲ್ದಾರ್ ಪುರಂದರ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು

ಕಾರ್ಯಕ್ರಮಕ್ಕೆ ಮೊದಲು ಬಿ.ಸಿ.ರೋಡ್ ತಾಲೂಕು ಕಚೇರಿ ಬಳಿಯಿಂದ ಎನ್‌ಸಿಸಿ ಮತ್ತು ಶಾಲಾ ಮಕ್ಕಳ ಪದಾತಿ ದಳದ ಪಥ ಸಂಚಲನ ವೇದಿಕೆಯ ತನಕ ನಡೆಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ. ಹನುಮಂತಪ್ಪಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News