ಪ್ರಜಾಪ್ರಭುತ್ವದಿಂದ ಉತ್ತಮ ನಾಯಕನ ಆಯ್ಕೆಗೆ ಅವಕಾಶ: ಐವನ್ ಡಿಸೋಜ

Update: 2016-08-08 16:01 GMT

ಪುತ್ತೂರು, ಆ.8: ಭಾರತ ದೇಶವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ನಡೆದಾಗ ಉತ್ತಮ ನಾಯಕನ ಆಯ್ಕೆಗೆ ಸಹಕಾರಿಯಾಗುತ್ತದೆ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರರು.

ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ ಆಸಕ್ತಿ ಕಡಿಮೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣ ಮೂಡಿ ಬಂದಾಗ ದೇಶವನ್ನಾಳುವ ಸಮರ್ಥ ಜನಪ್ರತಿನಿಧಿಗಳ ಆಯ್ಕೆಗೆ ಅವಕಾಶ ಸಿಗುತ್ತದೆ . ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟ ಗುರಿ ಮತ್ತು ಸಾಧಿಸುವ ಛಲ ಹೊಂದಿರಬೇಕು ಎಂದು ಅವರು ತಿಳಿಸಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಮಾತನಾಡಿ, ಶಿಕ್ಷಣ ಸಂಸ್ಥೆ ಯಶಸ್ವಿಯೆನಿಸಿಕೊಳ್ಳಬೇಕಾದರೆ, ಸಂಸ್ಥೆಯಲ್ಲಿರುವ ಕಟ್ಟಡ ಮತ್ತು ಸೌಲಭ್ಯಗಳು ಮುಖ್ಯವಾಗಿರುವುದಿಲ್ಲ. ಇಲ್ಲಿ ಆಸಕ್ತಿಯಿಂದ ವಿದ್ಯಾಭ್ಯಾಸ ವಾಡುತ್ತಿರುವ ವಿದ್ಯಾರ್ಥಿಗಳೇ ಪ್ರಾಮುಖ್ಯವಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸರಕಾರ ಮತ್ತು ಆಡಳಿತ ಮಂಡಳಿ ಸಮಾನವಾಗಿ ಕಾರ್ಯನಿರ್ವಹಿಸಿದಾಗ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಸಾಧ್ಯವಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸಂಚಾಲಕ ಅಲ್ಫ್ರೆಡ್ ಜೆ. ಪಿಂಟೊ ಮಾತನಾಡಿ, ವಿದ್ಯಾರ್ಥಿ ಸಂಘದ ನಾಯಕರು ಶಿಕ್ಷಣ ಸಂಸ್ಥೆಯ ಆಡಳಿತ ವ್ಯವಸ್ಥೆ ಮತ್ತು ವಿದ್ಯಾರ್ಥಿ ಸಮೂಹದೊಂದಿಗೆ ಉತ್ತಮ ರೀತಿಯ ಬಾಂಧವ್ಯವನ್ನು ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದರು.

 ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೊ ನೊರೊನ್ಹ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ರಾವ್ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಶುಭಾಶಂಸನೆಗೈದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾವ್ ಪಿ.ಜಿ. ಸ್ವಾಗತಿಸಿದರು. ಕಾರ್ಯದರ್ಶಿ ಜಿಜೊ ಜೋಸೆಫ್ ವಂದಿಸಿದರು. ಪಾವನಾ ಎ.ಜಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ವಿಜಯ ಕುಮಾರ್ ಎಂ. ಮತ್ತು ಭಾರತಿ ಎಸ್. ರೈ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News