ದೇವರಾಜ ಅರಸು ಸಾಧನೆ ಸಾರುವ ರಥಯಾತ್ರೆಗೆ ಚಾಲನೆ

Update: 2016-08-08 18:49 GMT


ಉಡುಪಿ, ಆ.8: ಉಡುಪಿ ಜಿಲ್ಲಾಡಳಿತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಡಿ.ದೇವರಾಜ ಅರಸು ಜನ್ಮ ಶತಮಾನೋತ್ಸವ ಪ್ರಯುಕ್ತ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸುರವರ ಸಾಧನೆ, ಜನಜಾಗೃತಿ ಕಾರ್ಯಕ್ರಮಗಳನ್ನು ಬಿಂಬಿಸುವ ರಥಯಾತ್ರೆಗೆ ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಸೋಮವಾರ ಸಂಜೆ ಚಾಲನೆ ನೀಡಲಾಯಿತು.

ರಥಯಾತ್ರೆಯನ್ನು ಉದ್ಘಾಟಿಸಿದ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಾರಿಗೆ ತಂದ ಸುಧಾರಣೆಗಳು ಮತ್ತು ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯುವಂತಾಗಬೇಕು. ಈಗಿನ ತಲೆಮಾರಿಗೆ ಅರಸು ಹಾಗೂ ಅವರ ಕಾರ್ಯಕ್ರಮಗಳ ಪರಿಚಯ ಮಾಡಬೇಕಾಗಿದೆ ಎಂದು ಹೇಳಿದರು. ಸಮಾಜದ ಎಲ್ಲಾ ವರ್ಗಗಳ ಜನರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದ ಅರಸು ಮಲಹೊರುವ ಅನಿಷ್ಟ ಪದ್ಧತಿಯನ್ನು ನಿಷೇಧ ಮಾಡಿದರು ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಪ್ರಭಾರ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಉಡುಪಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಹರೀಶ್ ಗಾಂವ್ಕರ್ ಸ್ವಾಗತಿಸಿದರು. ವಿಸ್ತರಣಾಧಿಕಾರಿ ದಯಾನಂದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಉಡುಪಿ, ಕಾರವಾರ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಿಂದ ಹೊರಟಿರುವ ಈ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಆ.19ರಂದು ಬೆಂಗಳೂರು ತಲುಪಲಿದೆ. ಉಡುಪಿಯಿಂದ ಹೊರಟ ರಥಯಾತ್ರೆಯು ಮಂಗಳೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಕೋಲಾರ ಜಿಲ್ಲೆಗಳ ಮೂಲಕ ಸುಮಾರು 875 ಕಿ.ಮೀ. ಸಂಚರಿಸಿ ಬೆಂಗಳೂರು ತಲುಪಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News