ದೇಶೀಯ ಜಾನುವಾರು ತಳಿಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ: ಪ್ರೊ. ಪ್ರೇಮ್ ಕುಮಾರ್

Update: 2016-08-09 10:25 GMT

ಮಂಗಳೂರು,ಆ.9: ನಮ್ಮ ಸ್ಥಳೀಯ ಜಾನುವಾರು ತಳಿಗಳಾಗಿರುವ ಮಲನಾಡು ಗಿಡ್ಡ, ದಿಯೊನಿ, ಅಮೃತ್ ಮಹಲ್ ಮೊದಲಾದವುಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೋಂದಣಿ ಹೊಂದಿದ್ದು, ಈ ತಳಿಗಳ ಭವಿಷ್ಯ ಉಜ್ವಲವಾಗಿದೆ ಎಂದು ಪಂಜಾಬ್ ಸರಕಾರದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕಾ ಇಲಾಖೆಯ ತಾಂತ್ರಿಕ ಸಲಹೆಗಾರ ಪ್ರೊ. ಪ್ರೇಮ್ ಕುಮಾರ್ ಉಪ್ಪಲ್ ಅಭಿಪ್ರಾಯಿಸಿದ್ದಾರೆ.

ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಎಸ್‌ಸಿಡಿಸಿಸಿ ಸಭಾಂಗಣದಲ್ಲಿ ಪಶುಪಾಲನೆ ಕುರಿತಾದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

3.90 ಮಿಲಿಯನ್ ಪಶುಗಳೊಂದಿಗೆ ಸ್ಥಳೀಯ ಪಶುಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ತೃತೀಯ ಸ್ಥಾನದಲ್ಲಿರುವುದು ತೃಪ್ತಿದಾಯಕ. ಕರ್ನಾಟಕದ ಸ್ಥಳೀಯ ಪಶು ತಳಿಗಳು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವುದರಿಂದ ವಂಶಾಭಿವೃದ್ಧಿಯ ಸಂದರ್ಭ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ವಿದೇಶೀ ತಳಿಗಳ ಮೂಲಕ ಪಶುಗಳ ಕೃತಕ ಗರ್ಭಧಾರಣೆ ಮಾಡುವ ಸಂದರ್ಭ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಸಲಹೆ ನೀಡಿದ ಅವರು, ಸದೃಶ ವಂಶವಾಹಿ ತಳಿಗಳಿಂದಲೇ ವಂಶಾಭಿವೃದ್ದಿ ಮಾಡಿಸುವ ಮೂಲಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯ. ಬೆಂಗಳೂರು ಸುತ್ತಮುತ್ತ ದೇಶೀಯ ತಳಿಗಳ ಜತೆ ಮಿಶ್ರ ತಳಿ ಪಡೆಯಲು ಎಚ್‌ಎಫ್ ವಿದೇಶಿ ತಳಿಯನ್ನು ಗರ್ಭಧಾರಣೆಗೆ ಬಳಸಬಹುದಾಗಿದೆ. ಅದೇ ರೀತಿ ಇತರ ಜಿಲ್ಲೆಗಳಲ್ಲಿ ಜರ್ಸಿ ಹಾಗೂ ಎಚ್‌ಎಫ್ ವಿದೇಶಿ ತಳಿಗಳನ್ನು ದೇಶೀಯ ತಳಿಗಳ ಜತೆ ಗರ್ಭಧಾರಣೆಗೆ ಬಳಸಬಹುದಾಗಿದೆ ಎಂದವರು ಹೇಳಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಹಾಲು ಮಹಾ ಮಂಡಳಿ ಅಧ್ಯಕ್ಷ ಪಿ. ನಾಗರಾಜ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಖ್ಯವಾಗಿ ಪಶು ಆಹಾರದ ಕೊರತೆ ಇದ್ದು ಅದನ್ನು ನೀಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದರು.

ಕೆಎಂಎಫ್‌ನ ಪಶುಸಂಗೋಪನಾ ನಿರ್ದೇಶಕ ಡಾ. ರಾಮಚಂದ್ರ ಭಟ್ ಮಾತನಾಡಿ, ಕೃತಕ ಗರ್ಭಧಾರಣೆ ಹಾಗೂ ಕ್ರಾಸ್ ಬ್ರೀಡಿಂಗ್‌ನಲ್ಲಿ ಕರ್ನಾಟಕ ಮುಂದಿದೆ. ಶೇ. 65ರಷ್ಟು ಪಶುಗಳ ವಂಶಾಭಿವೃದ್ಧಿ ಕೃತಕ ಗರ್ಭಧಾರಣೆಯ ಮೂಲಕವೇ ನಡೆಯುತ್ತಿದೆ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಹೈನುಗಾರಿಕಾ ಉದ್ಯಮದಲ್ಲಿ ವಿಶ್ವ ದಾಪುಗಾಲಿಡುತ್ತಿರುವುದರಿಂದ ಹಾಲಿನ ಫ್ಯಾಟ್ ಮತ್ತು ಎಸ್‌ಎನ್‌ಎಫ್‌ನ ಜತೆಗೆ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ವಹಿಸಿದ್ದರು. ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗದ ಔಷಧ, ಪಶು ವೈದ್ಯಕೀಯ ಕಾಲೇಜಿನ ಇಲಾಖಾ ಮುಖ್ಯಸ್ಥ ಪ್ರೊ. ಪ್ರಕಾಶ್ ನಡೂರು, ಎನ್‌ಡಿಆರ್‌ಐನ ಪ್ರಧಾನ ವಿಜ್ಞಾನಿ ಡಾ. ಕೆ.ಪಿ. ರಮೇಶ್, ಕರ್ನಾಟಕ ಹಾಲು ಮಹಾ ಮಂಡಳಿ ನಿರ್ದೇಶಕ ಹಿರೇಗೌಡ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ದಿವಾಕರ ಶೆಟ್ಟಿ, ನರಹರಿ ಪ್ರಭು, ಡಾ. ಪ್ರೇಮ್ ಕೃಷ್ಣ ಭಟ್, ಪದ್ಮನಾಭ ಶೆಟ್ಟಿ, ನಿರೇಕೃಷ್ಣ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಸಂಘಗಳ ವ್ಯವಸ್ಥಾಪಕ ಬಿ.ಕೆ. ಸಲೀಂ ಮೊದಲಾವದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News