ಹಂಪನಕಟ್ಟೆಯಲ್ಲಿ ರಸ್ತೆ ಬ್ಲಾಕ್ ಮಾಡಿದ ‘ಕಳ್ಳ’

Update: 2016-08-09 17:32 GMT

ಮಂಗಳೂರು, ಆ. 9: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ನಗರದ ಹಂಪನಕಟ್ಟೆ ಬಳಿಯ ಐಡಿಯಲ್ ಐಸ್‌ಕ್ರೀಂ ಪಾರ್ಲರ್ ಕಟ್ಟಡ ಛಾವಣಿ ಏರಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಘಟನೆ ಇಂದು ಸಂಜೆ ನಡೆದಿದೆ.

ಈತನ ರಾದ್ಧಾಂತವನ್ನು ವೀಕ್ಷಿಸಲು ಸ್ಥಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರಿಂದ ಹಂಪನಕಟ್ಟೆಯನ್ನು ಸೇರುವ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾದ ಘಟನೆಯೂ ನಡೆಯಿತು.

ಕಟ್ಟಡ ಏರಿದ ವ್ಯಕ್ತಿಯನ್ನು ಉತ್ತರ ಪ್ರದೇಶದ ಶಾನವಾಝ್ (30) ಎಂದು ಗುರುತಿಸಲಾಗಿದೆ. ಈತ ಇಂದು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿರುವ ಐಡಿಯಲ್ ಪಾರ್ಲರ್‌ನ ಕಟ್ಟಡದ ಛಾವಣಿ ಏರಿದ್ದ. ಸಾರ್ವಜನಿಕರ ಎದುರಲ್ಲೇ ಛಾವಣಿ ಮೇಲೆ ಅತ್ತಿಂದಿತ್ತ ಸಂಚರಿಸ ತೊಡಗಿದ್ದು, ಕುಡಿತ ಅಮಲಿನಲ್ಲಿದ್ದ ಈತ ಸಾರ್ವಜನಿಕರಲ್ಲಿ ಆತ್ಮಹತ್ಯೆ ಮಾಡುವ ಧಮಕಿ ಹಾಕುತ್ತಿದ್ದ. ಕೊನೆಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಂದರು ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ಕೆಳಗಿಳಿಯುವಂತೆ ಕೋರಿಕೊಂಡರೂ ಕೆಳಗೆ ಧುಮುಕುವ ಬೆದರಿಕೆ ಒಡ್ಡುತ್ತಿದ್ದ.

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದವರನ್ನು ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಕರೆಸಲಾಗಿತ್ತು. ಪಾಂಡೇಶ್ವರ ಹಾಗೂ ಕದ್ರಿ ಠಾಣಾ ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಶಾನವಾಝ್‌ನನ್ನು ಕೆಳಗಿಳಿಸಲು ಕೋರಿಕೊಂಡರೂ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಧಮಕಿ ಹಾಕುತ್ತಿದ್ದ. ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಹಾಗೂ ಕೆಲವು ಸ್ಥಳೀಯರು ಆತನ ಬಳಿ ತೆರಳಿ ಆತನಿಗೆ ಸಮಜಾಯಿಷಿ ಕೆಳಗಿಳಿಯುವಂತೆ ಮನವಿ ಮಾಡಿದ್ದರೂ ಆತನ ಅವರಲ್ಲಿ ಸಿಗರೇಟ್, ಹಣವನ್ನು ಕೇಳಿದ್ದು, ಈ ಸಂದರ್ಭದಲ್ಲಿ ಕೆಳಗಿಳಿದರೆ ಕೊಡುವುದಾಗಿಯೂ ತಿಳಿಸಲಾಯಿತು.

ಹೀಗೆ ಆತನಲ್ಲಿ ಮಾತನಾಡುತ್ತಲೇ ಕಟ್ಟಡ ಏರಿದ ಸುರತ್ಕಲ್‌ನ ರಿಝ್ವಿನ್, ಅಗ್ನಿ ಶಾಮಕ ದಳದ ರಮೇಶ್, ನವೀನ್ ಮತ್ತಿತರ ಪೈಕಿ ರಿಝ್ವಿನ್ ಆತನ ಕೈಯನ್ನು ಬಲವಾಗಿ ಹಿಡಿದ. ಕೂಡಲೇ ರಮೇಶ್, ನವೀನ್ ಮತ್ತಿತರರೂ ಆತನನ್ನು ಹಿಡಿದಿದ್ದು, ಅನಂತರ ಅಗ್ನಿಶಾಮಕ ದಳದ ಇತರ ಸಿಬ್ಬಂದಿ ಹಾಗೂ ಸ್ಥಳೀಯರು ಆತನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಜೆ 7 ಗಂಟೆಗೆ ಕಟ್ಟಡದ ಮೇಲೇರಿ ಈತ ಸೃಷ್ಟಿಸಿದ ರಾದ್ಧಾಂತ, ಆತಂಕಗಳು ರಾತ್ರಿ 9:20ಕ್ಕೆ ಕೆಳಗಿಳಿಸುವುದರೊಂದಿಗೆ ಮುಕ್ತಾಯ ಕಂಡಿತು.

ಟ್ರಾಫಿಕ್ ಜಾಮ್

ಈತನ ರಾದ್ಧಾಂತವನ್ನು ಸಾರ್ವಜನಿಕರು ಬೃಹತ್ ಸಂಖ್ಯೆಯಲ್ಲಿ ಸೇರಿ ವೀಕ್ಷಿಸುತ್ತಿದ್ದುದರಿಂದ ನಗರದಲ್ಲಿ ಸಂಚಾರ ದಟ್ಟಣೆ ತೀವ್ರಗೊಂಡಿತು. ಗಣಪತಿ ಹೈಸ್ಕೂಲ್ ಹೋಗುವ ರಸ್ತೆ, ಹಂಪನಕಟ್ಟೆ ಸೇರುವ ರಸ್ತೆ, ಸೆಂಟ್ರಲ್ ಮಾರುಕಟ್ಟೆ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಟೇಟ್ ಬ್ಯಾಂಕ್‌ನಿಂದ ಹೊರಡಿದ ಸರ್ವಿಸ್ ಮತ್ತು ಸಿಟಿ ಬಸ್ಸುಗಳು, ಖಾಸಗಿ ವಾಹನಗಳು ಮತ್ತು ಪ್ರಯಾಣಿಕರು ವಾಹನ ದಟ್ಟಣೆಯಿಂದಾಗಿ ಪರದಾಡಬೇಕಾಯಿತು. ಸುಮಾರು 2 ಗಂಟೆ ಕಾಲ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News