ಸಂಯುಕ್ತ ಜಮಾಅತ್ ವತಿಯಿಂದ ಹಜ್ ಯಾತ್ರೆ ವ್ಯವಸ್ಥೆಗೊಳಿಸಲು ಆಗ್ರಹ

Update: 2016-08-09 16:35 GMT

ಪುತ್ತೂರು, ಆ.9: ಹಜ್ ಯಾತ್ರಾರ್ಥಿಗಳಿಗೆ ಆಗುತ್ತಿರುವ ವಂಚನೆ ಹಾಗೂ ಹಣ ಕಬಳಿಸುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ವತಿಯಿಂದ ಮುಂದಿನ ವರ್ಷಗಳಿಂದ ಹಜ್ ಯಾತ್ರೆಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ಸಭೆಯು ಅಧ್ಯಕ್ಷ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಹಜ್ ಯಾತ್ರೆಯ ಸಂದರ್ಭದಲ್ಲಿ ಆಗುತ್ತಿರುವ ವಂಚನೆ ಹಾಗೂ ಹೆಚ್ಚು ಹಣ ವಸೂಲು ಮಾಡುತ್ತಿರುವ ಬಗ್ಗೆ ಸದಸ್ಯರು ತಿಳಿಸುತ್ತಾ ಸಂಯುಕ್ತ ಜಮಾಅತ್ ವತಿಯಿಂದ ಹಿಂದೆ ಹಜ್ ಯಾತ್ರೆಯ ವ್ಯವಸ್ಥೆ ಮಾಡಲಾಗುತ್ತಿದ್ದು, ಕಳೆದ 2 ವರ್ಷಗಳಲ್ಲಿ ಈ ವ್ಯವಸ್ಥೆ ಮಾಡಲಾಗಿಲ್ಲ. ಇದೀಗ ಹಲವಾರು ಮಂದಿಗೆ ಯಾತ್ರೆಯ ಸಂದರ್ಭದಲ್ಲಿ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಅಲ್ಲದೆ ಸಂಯುಕ್ತ ಜಮಾಅತ್ ಹಜ್ ಯಾತ್ರಾ ವ್ಯವಸ್ಥೆಯನ್ನು ನಿಲ್ಲಿಸಿರುವ ನೋವು ತಾಲೂಕಿನ ಜನರಲ್ಲಿ ವ್ಯಕ್ತವಾಗುತ್ತಿದೆ. ಇದರಿಂದಾಗಿ ಮುಂದಿನ ವರ್ಷದಿಂದ ಯಾತ್ರೆಗೆ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರಾದ ಅಬ್ದುರ್ರಹ್ಮಾನ್ ಹಾಜಿ ಬೈತಡ್ಕ, ಖಾಸಿಂ ಹಾಜಿ ಮಿತ್ತೂರು, ಅಬ್ದುರ್ರಹ್ಮಾನ್ ಅರ್ತಿಕೆರೆ, ಯೂಸುಫ್ ಕೈಕಾರ, ಹಾಜಿ ಮುಸ್ತಫಾ ಕೆಂಪಿ ಮತ್ತಿತರರು ಆಗ್ರಹಿಸಿದರು.

ಈ ಬಗ್ಗೆ ವಿಸ್ತ್ರತ ಚರ್ಚೆ ನಡೆದು ಮುಂದಿನ ವರ್ಷದಿಂದ ಸಂಸ್ಥೆಯ ವತಿಯಿಂದ ಹಜ್ ಯಾತ್ರೆಗೆ ವ್ಯವಸ್ಥೆ ಮಾಡುವುದೆಂದು ತೀರ್ಮಾನಿಸಲಾಯಿತು.

ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಎಸ್.ಬಿ.ಮುಹಮ್ಮದ್ ದಾರಿಮಿ, ಅಬ್ದುಲ್ ಅಝೀಝ್ ಬುಶ್ರಾ, ಕೆ.ಎಂ.ಬಾವಾ ಹಾಜಿ ಕೂರ್ನಡ್ಕ, ಅಬ್ದುಲ್ಲಾ ಹಾಜಿ ದರ್ಬೆ, ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಅಬ್ದುರ್ರಹ್ಮಾನ್ ಆಝಾದ್, ಅಬ್ದುಲ್ಲ ಕುಂಞಿ ಇಂಜಿನಿಯರ್, ಸುಲೈಮಾನ್ ಹಾಜಿ ಸಾಲ್ಮರ, ಪುತ್ತು ಬಾವ ಸವಣೂರು, ವಕೀಲ ಕೆ.ಎಂ. ಸಿದ್ದೀಕ್, ಕೆ.ಎಚ್. ಖಾಸಿಂ ಹಾಜಿ, ಎಲ್.ಟಿ. ಅಬ್ದುರ್ರಝಾಕ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು. ಸಂಯುಕ್ತ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಬಿ.ಎ. ಶಕೂರ್ ಹಾಜಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News