ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳಕ್ಕೆ ಕ್ಲೀನ್‌ಚಿಟ್ : ಆ. 19ರಂದು ಸಂಭ್ರಮಾಚರಣೆ

Update: 2016-08-10 15:07 GMT

ಬೆಳ್ತಂಗಡಿ, ಆ.10: ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್ 10ರಂದು ನಡೆದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಸಂತೋಷ್ ರಾವ್ ಎಂಬಾತನೇ ಕೊಲೆ ಮಾಡಿರುವುದಾಗಿ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಇದೀಗ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಕೆಲ ಪ್ರಯೋಜಿತ ಗುಂಪು ಆರೋಪಿಸಿದಂತೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬ ಮತ್ತು ಧರ್ಮಸ್ಥಳದ ನಾಗರಿಕರ ಪಾತ್ರವಿಲ್ಲ ಎಂಬುದು ಸಾಬೀತಾಗಿದೆ. ಸಿಬಿಐ ವರದಿಯಿಂದ ಧರ್ಮಸ್ಥಳಕ್ಕೆ ಬಂದ ಆರೋಪ ಮುಕ್ತವಾಗಿರುವುದಕ್ಕೆ ಆ. 19ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಳದ ನಾಗರಿಕರು ಸೇರಿಕೊಂಡು ಸತ್ಯಕ್ಕೆ ಸಂದ ಜಯ ಹೆಸರಿನಲ್ಲಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಧರ್ಮಸ್ಥಳ ಗ್ರಾಪಂ. ಅಧ್ಯಕ್ಷ ಚಂದನ್ ಕಾಮತ್ ತಿಳಿಸಿದ್ದಾರೆ.

ಬುಧವಾರ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಜನ್ಯ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನ ಪಾತ್ರವಿದೆ ಎಂದು ಸಿಐಡಿ ತನಿಖೆ ನಡೆಸುತ್ತಿದ್ದಾಗ ಧರ್ಮಸ್ಥಳದ ಧೀರಜ್ ಕೆಲ್ಲ, ಮಲ್ಲಿಕ್ ಹಾಗೂ ಉದಯ ಎಂಬವರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಸಿಒಡಿ ತನಿಖೆಯಲ್ಲಿ ಸಂತೋಷ್ ರಾವ್ ಕೊಲೆ ನಡೆಸಿದ್ದು, ಎಂದು ವರದಿ ನೀಡಿದ್ದರೂ, ಜನರಲ್ಲಿ ಅಪನಂಬಿಕೆ ಹುಟ್ಟಿಸಿದ್ದರಿಂದ ಪ್ರಕರಣದ ತನಿಖೆಯನ್ನು ಸರಕಾರ ಸಿಬಿಐಗೆ ವಹಿಸಿತ್ತು. ಇದೀಗ ಸಿಬಿಐ ನಡೆಸಿದ ತನಿಖೆಯಲ್ಲಿ ಸಂತೋಷ್ ರಾವ್ ಮಾತ್ರ ಆರೋಪಿ ಎಂದು ಸಾಬೀತಾಗಿದೆ. ಸಿಬಿಐ ವರದಿಯಿಂದ ಸತ್ಯಕ್ಕೆ ಜಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಕೇಶವ ಗೌಡ, ಕೆಲ ಸ್ಥಾಪಿತ ಹಿತಾಸಕ್ತಿಗಳು ಹೆಗ್ಗಡೆ ಕುಟುಂಬದ ಮೇಲೆ, ಧರ್ಮಸ್ಥಳದ ನಾಗರಿಕರ ಮೇಲೆ ಸುಳ್ಳು ಆರೋಪ ಮಾಡಿ ಕಳಂಕ ಅಂಟಿಸುವ ಪ್ರಯತ್ನ ನಡೆಸಿದ್ದರು. ಇದೀಗ ಸತ್ಯ ಬಹಿರಂಗಗೊಂಡಿದ್ದು ಹೆಗ್ಗಡೆಯಂತಹವರ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ದ ಸರಕಾರ ಮತ್ತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಿಬಿಐ ವರದಿಯಿಂದ ಕಾನೂನಿನ ಅಡಿಯಲ್ಲಿ ಧರ್ಮಸ್ಥಳಕ್ಕೆ ನ್ಯಾಯ ಸಿಕ್ಕಿರಬಹುದು. ಆದರೆ ಸಾಮಾಜಿಕ ನೆಲೆಯಲ್ಲಿ ನ್ಯಾಯ ಇನ್ನಷ್ಟೇ ಸಿಗಬೇಕಿದೆ. ಸಿಬಿಐ ವರದಿಯಿಂದ ಸೌಜನ್ಯಳ ಆತ್ಮಕ್ಕೆ ಶಾಂತಿ ದೊರಕಿದೆ. ಈ ಸಂಭ್ರಮವನ್ನು ಆಚರಿಸಲು ಧರ್ಮಸ್ಥಳದ ಗ್ರಾಮಸ್ಥರು ನಿರ್ಧರಿಸಿದ್ದು,ಸತ್ಯಕ್ಕೆ ಸಂದ ಜಯಹೆಸರಿನಲ್ಲಿ ಆ. 19ರಂದು ಧರ್ಮಸ್ಥಳದಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳದ ನಾಗರಿಕರಾದ ಭಾಸ್ಕರ ಧರ್ಮಸ್ಥಳ, ಬಾಲಕೃಷ್ಣ ಪೂಜಾರಿ, ರತ್ನವರ್ಮ ಜೈನ್, ಹರಿದಾಸ್ ಗಾಂಭೀರ್, ಗ್ರಾಪಂ. ಸದಸ್ಯರಾದ ಶ್ರೀನಿವಾಸ್ ರಾವ್, ಸುಧಾಕರ, ರಕ್ಷಿತ್, ಟಿ.ವಿ.ದೇವಸ್ಯ, ಸಿದ್ಧೀಕ್, ಲಕ್ಷ್ಮೀ ಭಟ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News