ಈ ಗ್ರಾಮದಲ್ಲಿ ವಿಕಲಚೇತನರೇ ಅಧಿಕ!

Update: 2016-08-11 13:06 GMT

ಕಾಸರಗೋಡು, ಆ.11: ಜಿಲ್ಲೆಯ 11 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಶಕಗಳಿಂದ ಜನತೆಯನ್ನು ನರಕಯಾತನೆಗೆ ತಳ್ಳಿದ ಎಂಡೋಸಲ್ಫಾನ್‌ನ ಕರಾಳ ಛಾಯೆ ಇಂದಿಗೂ ಜೀವಂತವಾಗಿದೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಕರಾವಳಿಯ ಇನ್ನೂ ಕೆಲವು ಪ್ರದೇಶಗಳ ಜನರ ಬದುಕಿಗೆ ಸವಾಲಾಗಿ ಕಾಡುತ್ತಿದೆ. ಇದಕ್ಕೊಂದು ನಿದರ್ಶನ ಕುಂಬಳೆ- ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರು ಗ್ರಾಪಂ. ಮೊಗ್ರಾಲ್ ಪುತ್ತೂರು ಗ್ರಾಪಂ ವ್ಯಾಪ್ತಿಯ ಹಲವು ಕುಟುಂಬಗಳ ಬದುಕು ಇನ್ನೂ ದುಸ್ತರವಾಗಿದೆ. ಇಲ್ಲಿನ ನೂರಾರು ಮಂದಿ ಹಲವು ಶಾರೀರಿಕ ವೈಕಲ್ಯಕ್ಕೆ ತುತ್ತಾಗಿ ನರಕಯಾತನೆ ಬದುಕು ಸವೆಸುತ್ತಿದ್ದಾರೆ. ನವಜಾತ ಶಿಶುವಿನಿಂದ ಹಿಡಿದು ವೃದ್ಧರ ತನಕ ವಿಕಲಚೇತನರ ಸಂಖ್ಯೆ ಬಹಳಷ್ಟಿದೆ. ಶಾಲೆಯಲ್ಲಿ ನಕ್ಕು  ನಲಿಯಬೇಕಾದ ಮಕ್ಕಳು, ದುಡಿಯಬೇಕಾದ ಯುವಕರು ಹಾಸಿಗೆ ಹಿಡಿದಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಸಮೀಕ್ಷೆ ನಡೆಸಿದಾಗ ಮೊಗ್ರಾಲ್ ಪುತ್ತೂರು ಗ್ರಾಪಂ ವ್ಯಾಪ್ತಿಯಲ್ಲಿ 350ಕ್ಕೂ ಅಧಿಕ ವಿಕಲಚೇತನರಿರುವುದನ್ನು ಗುರುತಿಸಲಾಗಿತ್ತು. ಆದರೆ ನಿಖರ ಸಂಖ್ಯೆ 600ಕ್ಕೂ ಅಧಿಕ ಎಂದು ಹೇಳಲಾಗುತ್ತಿದೆ. ಕೇವಲ ಒಂದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಷ್ಟೊಂದು ಸಂಖ್ಯೆಯ ವಿಕಲಚೇತನರಿರುವುದು ಗಂಭೀರ ವಿಷಯವಾಗಿದೆ. ಕ್ಯಾನ್ಸರ್, ದೈಹಿಕ ಚಲನಶಕ್ತಿ ಕಳಕೊಂಡಿರುವುದು, ಬುದ್ಧಿಮಾಂದ್ಯತೆ ಹೀಗೆ ಹತ್ತು ಹಲವು ತರದ ಸಮಸ್ಯೆಗಳು ಈ ಪ್ರದೇಶ ವ್ಯಾಪ್ತಿಯಲ್ಲಿ ಜನರಲ್ಲಿ ಕಂಡುಬರುತ್ತಿದೆ. ಕೆಲ ಕುಟುಂಬದಲ್ಲಿ ಇಬ್ಬರು ಸಂತ್ರಸ್ತರೂ ಇದ್ದಾರೆ. ಆದರೆ ಈ ಆರೋಗ್ಯ ಸಮಸ್ಯೆಗಳಿಗೆ ನೈಜ ಕಾರಣ ಏನೆಂಬುದು ಇನ್ನೂ ಬಹಿರಂಗಗೊಂಡಿಲ್ಲವಾದರೂ ಎಂಡೋಸಲ್ಫಾನ್‌ನಂತಹ ಮಾರಕ ಕೀಟನಾಶಕ ಈ ಪ್ರದೇಶದಲ್ಲಿ ಬಳಕೆಯಾಗಿರುವುದೇ ಇದಕ್ಕೆ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ಕೇಳಿಬರುತ್ತಿದೆ.

ತೋಟಗಾರಿಕಾ ಬೆಳೆಗಳಿಗೆ ಬಳಸುತ್ತಿದ್ದ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಈ ದುಷ್ಪರಿಣಾಮಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಈ ಪ್ರೆದೇಶದ ಕೆಲ ಬಾವಿಗಳಿಂದ ಕುಡಿಯುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಕೀಟ ನಾಶಕದ ಅಂಶ ಇರುವುದು ಬೆಳಕಿಗೆ ಬಂದಿತ್ತು.

 ಇದರ ಜೊತೆಗೆ ಮೊಗ್ರಾಲ್ ಹಾಗೂ ಪರಿಸರದ ಹೊಳೆ, ತೋಡುಗಳಿಗೆ ಭಾರೀ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇವು ಸಮೀಪದ ಬಾವಿ ಸೇರಿದಂತೆ ಕುಡಿಯುವ ನೀರಿನ ಮೂಲವನ್ನು ಸೇರುತ್ತಿದ್ದು, ಈ ನೀರು ಸೇವನೆ ಕೂಡಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಗ್ರಾಲ್ ಪುತ್ತೂರು ಗ್ರಾಪಂ ವ್ಯಾಪ್ತಿಯ 200ರಷ್ಟು ಫಲಾನುಭವಿಗಳಿಗೆ ಮಾತ್ರ ಮಾಸಾಶನ ಲಭಿಸುತ್ತಿದೆ. ರೋಗಿಗಳನ್ನು ಗುರುತಿಸುವಲ್ಲಿ ಮುತುವರ್ಜಿ ವಹಿಸದ ಕಾರಣ ಬಹುತೇಕ ಮಂದಿ ಸರಕಾರದ ಸೌಲಭ್ಯವಿಲ್ಲದೆ ಕೊರಗುವಂತಾಗಿದೆ. ಸಿಗುವ ಮಾಸಾಶನ ಚಿಕಿತ್ಸೆಗೆ ಸಾಕಾಗುವಷ್ಟಿಲ್ಲ. ಕೆಲ ವರ್ಷಗಳ ಹಿಂದೆ ಇಲ್ಲಿನ ಸಮಸ್ಯೆಯ ಬಗ್ಗೆ ಹಲವು ಅಧ್ಯಯನ ನಡೆಸಿದರೂ ಈ ಬಗ್ಗೆ ಗ್ರಾಮ ಪಂಚಾಯತ್‌ನಲ್ಲೂ ಸಮರ್ಪಕವಾದ ಅಂಕಿಅಂಶಗಳು ಇಲ್ಲದಿರುವುದು ವಿಪರ್ಯಾಸ.
ಈ ರೀತಿಯಾಗಿ ಎಂಡೋಸಲ್ಫಾನ್‌ನಂತಹ ಮಾರಕ ಕೀಟನಾಶಕದಿಂದಾಗಿ ಸಾವಿರಾರು ಮಂದಿಯ ಬದುಕು ಇಂದಿಗೂ ನರಕಸದೃಶ ಮಾಡಿದೆ. ಪೆರ್ಲ, ವಾಣಿನಗರ, ಎಣ್ಮಕಜೆ, ಬೆಳ್ಳೂರು, ಮುಳಿಯಾರು ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಇದರ ದುಷ್ಪರಿಣಾಮ ಎಷ್ಟರಮಟ್ಟಿಗೆ ಜಿಲ್ಲೆಯ ಜನತೆಯ ಮೇಲೆ ಬೀರಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿದರೆ ನಮ್ಮ ಮನಕಲಕುವಂತೆ ಮಾಡುತ್ತಿದೆ.


   ಈ ಹಿಂದೆ ಮೊಗ್ರಾಲ್ ಪುತ್ತೂರು ಗ್ರಾಪಂ ವ್ಯಾಪ್ತಿಯಲ್ಲಿನ ಆರೋಗ್ಯ ಸಮಸ್ಯೆಗಳು ಬೆಳಕಿಗೆ ಬಂದ ಸಂದರ್ಭದಲ್ಲಿ ಸಚಿವರು ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರಕಾರಕ್ಕೆ ಇಲ್ಲಿನ ಬಗ್ಗೆ ಸಮಗ್ರ ವರದಿ ಕೂಡಾ ಸಲ್ಲಿಕೆಯಾಗಿದೆ. ಅದೇ ರೀತಿ ವರ್ಷದ ಹಿಂದೆ ಅಮೆರಿಕ ವಿಶ್ವವಿದ್ಯಾನಿಲಯದ ತಂಡವೊಂದು ಇಲ್ಲಿ ಅಧ್ಯಯನ ನಡೆಸಿತ್ತು. 200ರಷ್ಟು ಸಂತ್ರಸ್ತರನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿತ್ತು.ಆದರೆ ಹಲವು ಅಧ್ಯಯನ, ಸರಕಾರಕ್ಕೆ ಮನವಿ, ಜನಪ್ರತಿನಿಧಿಗಳಿಂದ ಪರಿಶೀಲನೆ ಎಲ್ಲಾ ಆಗಿದ್ದರೂ, ಇಲ್ಲಿನ ಸಂತ್ರಸ್ತರ ಪುನರ್ವಸತಿಗೆ ಯಾವುದೇ ರೀತಿಯ ಪ್ಯಾಕೇಜ್ ಅನುಷ್ಠಾನಕ್ಕೆ ಬಂದಿಲ್ಲ.

Writer - -ಸ್ಟೀಫನ್ ಕಯ್ಯರ್

contributor

Editor - -ಸ್ಟೀಫನ್ ಕಯ್ಯರ್

contributor

Similar News