ಉಡುಪಿ ಜಿಲ್ಲಾ ಎಸ್ಪಿಯಾಗಿ ಕೆ.ಟಿ.ಬಾಲಕೃಷ್ಣ ಅಧಿಕಾರ ಸ್ವೀಕಾರ

Update: 2016-08-11 16:30 GMT

ಉಡುಪಿ, ಆ.11: ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಕೆ.ಟಿ.ಬಾಲಕೃಷ್ಣ ಅವರು ಇಂದು ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಕೆ.ಟಿ.ಬಾಲಕೃಷ್ಣ ಅವರು ಉಡುಪಿ ಜಿಲ್ಲಾ ಪ್ರಭಾರ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್‌ರಿಂದ ಅಧಿಕಾರ ಸ್ವೀಕರಿಸಿದರು.

ಜಿಲ್ಲೆಯಲ್ಲಿ ಸಾಂಪ್ರದಾಯಿಕ ಅಪರಾಧಗಳೊಂದಿಗೆ ಸಂಘಟಿತ ಅಪರಾಧ ಗಳನ್ನು ನಿಯಂತ್ರದಲ್ಲಿಡಲು ತಾನು ಆದ್ಯತೆ ನೀಡುವುದಾಗಿ ಅವರು ಅಧಿಕಾರ ಸ್ವೀಕಾರದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯಲ್ಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡುವುದಿಲ್ಲ. ಕಾನೂನು ಪ್ರಕಾರ ಅಂಥವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದವರು ಭರವಸೆ ನೀಡಿದರು.

ಈಗ ನಾಡಿನಾದ್ಯಂತ ಸಂಚಲನ ಮೂಡಿಸಿರುವ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಕುರಿತು ಸಮಗ್ರ ಮಾಹಿತಿಗಳನ್ನು ಪಡೆದು ತನಿಖೆ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದಾಗಿ ನುಡಿದರು. ಪ್ರತಿ ಜಿಲ್ಲೆಗೂ ಅದರದೇ ಆದ ಸವಾಲುಗಳು, ಸಮಸ್ಯೆಗಳಿರುತ್ತವೆ. ಈ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಜನಸ್ನೇಹಿ ಪೊಲೀಸಿಂಗ್ ತನ್ನ ಆದ್ಯತೆಯಾಗಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚಿನ ಗಮನ ಹರಿಸುತ್ತೇನೆ. ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಪ್ರಾರಂಭಗೊಂಡಿರುವ ಬಗ್ಗೆ ಪ್ರಶ್ನಿಸಿದಾಗ, ಎಎನ್‌ಎಫ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಂಡು ಸಮಸ್ಯೆ ಮತ್ತೆ ತಲೆಎತ್ತದಂತೆ ನೋಡುವುದಾಗಿ ತಿಳಿಸಿದರು.

ಪ್ರತಿ ಇಲಾಖೆಗಳಲ್ಲೂ ಸಮಸ್ಯೆಗಳಿರುತ್ತವೆ. ಆದರೆ ಸರಕಾರ ನೀಡಿರುವ ಸೌಲಭ್ಯಗಳೊಂದಿಗೆ ವ್ಯವಸ್ಥೆಯ ಇತಿ-ಮಿತಿಯೊಳಗೆ ಕೆಲಸ ಮಾಡಲು, ಜನರಿಗೆ ಗರಿಷ್ಠ ಸೇವೆ ನೀಡಲು ಪ್ರಯತ್ನಿಸುವುದಾಗಿ ಬಾಲಕೃಷ್ಣ ನುಡಿದರು.

1997ರಲ್ಲಿ ಚೆನ್ನಪಟ್ಟಣದಲ್ಲಿ ಡಿವೈಎಸ್ಪಿಯಾಗಿ ಸೇವೆಗೆ ಸೇರಿದ ಕೆ.ಟಿ.ಬಾಲಕೃಷ್ಣ ಮುಂದೆ ಚಾಮರಾಜ ನಗರ, ಮೈಸೂರು ನಗರಗಳಲ್ಲೂ ಸೇವೆ ಸಲ್ಲಿಸಿದ್ದರು. 2006ರಲ್ಲಿ ಐಪಿಎಸ್‌ಗೆ ಭಡ್ತಿ ಪಡೆದ ಅವರು ಸಿಐಡಿ ಎಸ್ಪಿಯಾಗಿ ಮುಂದೆ ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2003ರಲ್ಲಿ ಚಾಮರಾಜ ನಗರದಲ್ಲಿ ವೀರಪ್ಪನ್‌ನಿಂದ ಹತ್ಯೆಗೊಳಗಾದ ಮಾಜಿ ಸಚಿವ ನಾಗಪ್ಪ ಅವರ ನಾಲ್ವರು ಕೊಲೆಗಾರರನ್ನು ಪತ್ತೆ ಹಚ್ಚಿದ ಕಾರಣಕ್ಕಾಗಿ ತಮಗೆ ಪೊಲೀಸ್ ಪದಕ ದೊರಕಿತ್ತು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News