ಯುಪಿಎಸ್ಸಿ ವಯೋಮಿತಿ ಇಳಿಕೆ ಶಿಫಾರಸು ತಿರಸ್ಕರಿಸಲು ಐವನ್ ಆಗ್ರಹ

Update: 2016-08-12 09:45 GMT

ಮಂಗಳೂರು, ಆ.12: ಭಾರತೀಯ ಉನ್ನತ ನಾಗರಿಕ ಸೇವೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಕಡಿತಗೊಳಿಸಲು ಮಾಜಿ ಶಿಕ್ಷಣ ಕಾರ್ಯದರ್ಶಿ ಬಿ.ಎಸ್.ಬಸ್ವಾನ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯನ್ನು ನಾಗರಿಕ ಸೇವಾ ಆಯೋಗ ತಿರಸ್ಕರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯ ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.
 
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಪ್ರಧಾನಿ ಮೋದಿ ಅವರನ್ನು ರಾಜ್ಯದ ಹಿಂದುಳಿದ ವರ್ಗಗಳ ನಿಯೋಗದ ಜತೆ ಭೇಟಿ ಮಾಡಿ, ಈ ವರದಿ ಅನುಷ್ಠಾನದಿಂದ ಆಗಬಹುದಾದ ತೊಂದರೆಗಳ ಬಗ್ಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಭೇಟಿಗೆ ಸಮಯ ಕೋರಿ ಪತ್ರ ಬರೆಯಲಾಗಿದೆ ಎಂದರು. ಬಸ್ವಾನ್ ಅವರ ವರದಿಯ ಹಿಂದೆ ಕಾಣದ ಕೈಗಳು ಆಡಳಿತ ಮತ್ತು ಶಿಕ್ಷಣದ ಪ್ರಭುತ್ವ ಸಾಧಿಸುವ ರಾಜಕೀಯ ಉದ್ದೇಶಿತ ಸಂಚು ರೂಪಿಸಿವೆ ಎಂದು ಆರೋಪಿಸಿದರು.

ಪ್ರಸ್ತುತ ನಾಗರಿಕೆ ಸೇವೆಗಳಿಗೆ ಸೇರ್ಪಡೆಗಾಗಿ ಗರಿಷ್ಠ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ ಪಂಗಡಗಳಿಗೆ 5 ವರ್ಷಗಳ ಸಡಿಲಿಕೆಯಿದೆ. ಹಿಂದುಳಿಗ ವರ್ಗಗಳಿಗೆ 3 ವರ್ಷಗಳ ರಿಯಾಯಿತಿ ಹಾಗೂ ಅಂಗವಿಕಲರಿಗೆ 10 ವರ್ಷಗಳ ಸಡಿಲಿಕೆಯಿದೆ. ನಾಗರಿಕ ಸೇವಾ ಪರೀಕ್ಷೆಯ ಸಿದ್ದತೆಗಾಗಿ ಹಲವಾರು ವರ್ಷಗಳನ್ನು ವ್ಯಯಿಸಿರುವವರನ್ನು ಗಮನದಲ್ಲಿಟ್ಟುಕೊಂಡು ಸಮಿತಿ ಈ ಸಲಹೆ ನೀಡಿದೆ. ಆಯೋಗವು ಗರಿಷ್ಠ ವಯೋಮಿತಿಯನ್ನು ಹಂತ ಹಂತವಾಗಿ ಇಳಿಕೆ ಮಾಡಬೇಕೆಂದು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ. ಆದರೆ, ಈ ವರದಿಯನ್ನು ನೇರವಾಗಿ ತಿರಸ್ಕರಿಸಬೇಕು ಎಂದು ಅವರು ಆಗ್ರಹಿಸಿದರು. ಸಿಬಿಎಸ್‌ಸಿ ಶಿಕ್ಷಣ ವ್ಯವಸ್ಥೆಯಲ್ಲಿ ಜರ್ಮನ್ ಮತ್ತು ಫ್ರೆಂಚ್ ಭಾಷೆಯನ್ನು ತೆಗೆದು ಸಂಸ್ಕೃತವನ್ನು ಸೇರಿಸಲಾಗಿದೆ. ಇದರಿಂದ ಉನ್ನತ ಶಿಕ್ಷಣ ಪಡೆಯುವಲ್ಲಿ ಮತ್ತು ವಿದೇಶದಲ್ಲಿ ಉದ್ಯೋಗ ಗಳಿಸಲು ತೊಂದರೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಕುಮಾರ್, ಮನುರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News