ಉಪ್ಪಿನಂಗಡಿ: ಸರಕಾರಿ ಕಾಲೇಜಿನ ಕಳವು ಪ್ರಕರಣವನ್ನು ಶೀಘ್ರ ಭೇದಿಸಲು ಶಾಸಕಿ ಸೂಚನೆ

Update: 2016-08-12 14:59 GMT

ಉಪ್ಪಿನಂಗಡಿ, ಆ.12: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್ ಕಳವು ಪ್ರಕರಣದ ಮೂಲವನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕಾರ್ಯವಾಗಬೇಕಾಗಿದ್ದು, ಇದರ ಅಮೂಲಾಗ್ರ ತನಿಖೆ ನಡೆಸುವಂತೆ ಶಾಸಕಿ, ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಯ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಸಂಜೆ ಕಾಲೇಜಿಗೆ ಆಗಮಿಸಿದ ಶಾಸಕಿ, ಪೊಲೀಸ್ ಅಧಿಕಾರಿಗಳ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತುರ್ತುಸಭೆ ಕರೆದು ಚರ್ಚಿಸಿ ಈ ಸೂಚನೆ ನೀಡಿದರು.

ರಾಷ್ಟ್ರೀಯ ಉಚ್ಛತರ್ ಶಿಕ್ಷಣ್ ಅಭಿಯಾನ (ರೂಸ) ಯೋಜನೆಯ ‘ಜ್ಞಾನ ಸಂಗಮ’ ಕಾರ್ಯಕ್ರಮದಡಿಯಲ್ಲಿ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ 29 ಲ್ಯಾಪ್‌ಟಾಪ್, 21 ಪ್ರೊಜೆಕ್ಟರ್‌ನಲ್ಲಿ ಒಟ್ಟು 2,74,960 ರೂ. ವೌಲ್ಯದ ಸೊತ್ತು ಕಳವಾಗಿತ್ತು. ಈ ಬಗ್ಗೆ ಶುಕ್ರವಾರ ನಡೆದ ಸಿಡಿಸಿ ಸಭೆಯಲ್ಲಿ ಚರ್ಚೆ ನಡೆಸಿದ ಶಕುಂತಳಾ ಶೆಟ್ಟಿ, ಪ್ರಾಚಾರ್ಯರ ಸುಪರ್ದಿಯಲ್ಲಿರುವ ಕಪಾಟಿನ ಬೀಗ ತೆಗೆದು ಕಳವು ಆಗಿರಬೇಕಾದರೆ, ಕಾಲೇಜಿನಲ್ಲಿದ್ದವರೇ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಅಮೂಲಾಗ್ರ ತನಿಖೆಯಾಗಬೇಕು. ಉಪನ್ಯಾಸಕರು ಸೇರಿದಂತೆ ಕಾಲೇಜಿನಲ್ಲಿರುವ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕರೋರ್ವರು ಮಾತನಾಡಿ, ಕಾಲೇಜಿನಲ್ಲಿರುವ ಎರಡು ಸಿಸಿ ಕ್ಯಾಮರಾಗಳಲ್ಲಿ ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಕಾಲೇಜಿನ ಪ್ರವೇಶ ದ್ವಾರದಲ್ಲಿರುವ ಸಿಸಿ ಕ್ಯಾಮರಾವನ್ನು ಈ ಹಿಂದೆಯೇ ಪುಡಿ ಮಾಡಲಾಗಿದೆ. ಇರುವ ಒಂದು ಸಿಸಿ ಕ್ಯಾಮರವನ್ನು ಕೂಡಾ ಸಂಜೆ ಹೋಗುವಾಗ ಆಫ್ ಮಾಡಿ ಹೋಗಲಾಗುತ್ತಿದೆ ಎಂದು ದೂರಿದರು.

ಸಿಡಿಸಿ ಸದಸ್ಯರು ಮಾತನಾಡಿ, ಕಾಲೇಜಿನ ಪ್ರಾಚಾರ್ಯರ ಬೇಜಾವಬ್ದಾರಿಯಿಂದಲೇ ಈ ರೀತಿ ಆಗುತ್ತಿದ್ದು, ಹಲವು ಸಮಸ್ಯೆಗಳು ಉದ್ಭವವಾಗಲು ಕಾರಣವಾಗಿದೆ. ಈ ಬಾರಿ ಕಾಲೇಜಿನ ಅಧ್ಯಯನ ತರಗತಿಯಲ್ಲೊಂದಾದ ಕೆಪಿಎಸ್ ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿತ್ತು. ಆದರೆ, ಈ ಬಗ್ಗೆ ವಿಷಯ ತಿಳಿದು ಸಿಡಿಸಿಯವರು ವಿದ್ಯಾರ್ಥಿಗಳ ಮನವೊಲಿಸಿದ್ದು, ಇದೀಗ 22 ಜನ ಸೇರ್ಪಡೆಗೊಂಡಿದ್ದಾರೆ. ಇಲ್ಲಿನ ಪ್ರಾಚಾರ್ಯರಿಗೆ ಇಚ್ಛಾಶಕ್ತಿಯ ಕೊರತೆಯಿದ್ದು, ಕಳವು ನಡೆದ ಹಲವು ದಿನಗಳ ಬಳಿಕ ದೂರು ಕೊಟ್ಟಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕೂಡಾ ಸಿಡಿಸಿಯವರ ಗಮನಕ್ಕೆ ತರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಯಾವುದೇ ಕಾರಣಕ್ಕೂ ಕಾಲೇಜಿನ ಶಿಸ್ತಿಗೆ ಭಂಗವಾಗದಂತೆ ಎಚ್ಚರವಹಿಸಿ. ಕಾಲೇಜು ತರಗತಿಗೆ ಬಾರದೆ ಮಾರ್ಗಸುತ್ತುವ ವಿದ್ಯಾರ್ಥಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ. ಒಂದು ಬಾರಿ ವಿದ್ಯಾರ್ಥಿಗಳ ಹೆತ್ತವರನ್ನು ಕರೆದು ಅವರ ನಡವಳಿಕೆಗಳನ್ನು ತಿಳಿಸಿ, ಅವರು ಮತ್ತೂ ಸರಿದಾರಿಗೆ ಬರದಿದ್ದರೆ, ಅವರಿಗೆ ಕಾಲೇಜಿನಿಂದಲೇ ಗೇಟ್ ಪಾಸ್ ನೀಡಿ. ಅಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಬೇಡ. ಉಪನ್ಯಾಸಕರು ಜಾತಿ-ಧರ್ಮದ ಭೇದ ನೋಡದೆ ಎಲ್ಲಾ ವಿದ್ಯಾರ್ಥಿಗಳನ್ನು ನಮ್ಮದೇ ಮಕ್ಕಳೆಂದು ತಿಳಿದು ಅವರ ಭವಿಷ್ಯ ರೂಪಿಸಲು ಮುಂದಾಗಿ. ಕಾಲೇಜಿನೊಳಗೆ ರಾಜಕೀಯ ಪ್ರವೇಶಿಸದಂತೆ ಎಚ್ಚರವಹಿಸಿ. ಇದರೊಂದಿಗೆ ಈ ಕಳವು ಪ್ರಕರಣದ ಮೂಲ ಪತ್ತೆ ಹಚ್ಚಲು ಸಹಕಾರ ನೀಡಿ ಎಂದು ಹೇಳಿದರು.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ಮಾತನಾಡಿ, ಕಳವು ಕೃತ್ಯ ಯಾರು ಮಾಡಿದ್ದಾರೆ ಎಂಬ ಬಗ್ಗೆ ನಿಮಗೆ ಸಂಶಯಗಳೇನಾದರೂ ಇದ್ದರೆ ಠಾಣೆಗೆ ಬಂದು ನೇರವಾಗಿ ತಿಳಿಸಬಹುದು. ಅದರ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು. ಕಾಲೇಜಿನಲ್ಲಿರುವ ಎಲ್ಲರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ಸೂಚಿಸಲಾಗುವುದು ಎಂದರು.

ಈ ನಡುವೆ ಉಪ್ಪಿನಂಗಡಿ ಕಾಲೇಜಿನಲ್ಲಿ 2 ಲ್ಯಾಪ್‌ಟಾಪ್, 3 ಪ್ರೊಜೆಕ್ಟರ್ ಹಾಗೂ 10 ಲ್ಯಾಪ್‌ಟಾಪ್ ಬ್ಯಾಗ್ ಕಳವಾಗಿರುವ ಬಗ್ಗೆ ದೂರು ನೀಡಿದ ಬಳಿಕ ಮತ್ತೆರಡು ಪ್ರೊಜೆಕ್ಟರ್ ಕಳವಾದ ಬಗ್ಗೆ ಬೆಳಕಿಗೆ ಬಂದಿದೆ. ಮೊದಲೇ ಇದು ಕಳವಾಗಿ ಕಾಲೇಜಿನವರ ಗಮನಕ್ಕೆ ಬಾರದೆ ಉಳಿದಿತ್ತೆ? ಅಥವಾ ಆ ಬಳಿಕ ಕಳವಾಗಿತ್ತೆ ಎನ್ನುವುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ. ಇನ್ನೊಂದೆಡೆ ಪ್ರೊಜೆಕ್ಟರ್‌ನಲ್ಲಿ ಮುದ್ರಿತವಾಗಿರುವ ಸೀರಿಯಲ್ ನಂಬರ್‌ಗಳನ್ನು ಕೂಡಾ ಅಳಿಸಿ ಹಾಕಲಾಗಿದೆ. ಈ ಸೀರಿಯಲ್ ನಂಬರ್‌ಗಳನ್ನು ಕಾಲೇಜಿನವರು ದಾಖಲಿಸಿಕೊಳ್ಳದಿರುವುದು ಗೊತ್ತಿದ್ದೇ ಕಳ್ಳರು ತಮ್ಮ ಚಾಣಾಕ್ಷತನ ಉಪಯೋಗಿಸಿಕೊಂಡಿದ್ದಾರೆ.

ಸಬೆಯಲ್ಲಿ ಉಪ್ಪಿನಂಗಡಿ ಠಾಣಾಧಿಕಾರಿ ತಿಮ್ಮಪ್ಪನಾಯ್ಕ, ಕಾಲೇಜಿನ ಪ್ರಾಚಾರ್ಯೆ ಮೇರಿ ಬಿ.ಸಿ., ಸಿಡಿಸಿ ಉಪಾಧ್ಯಕ್ಷ ರಘುನಾಥ್ ರೈ ಅಲಿಮಾರ್, ಸದಸ್ಯರಾದ ಅಶ್ರಫ್ ಬಸ್ತಿಕಾರ್, ಮಹೇಂದ್ರ ವರ್ಮ, ಮಾಣಿಕ್ಯರಾಜ್ ಪಡಿವಾಳ್, ಸುಂದರೇಶ್ ಅತ್ತಾಜೆ, ಅಮಿತಾ ಹರೀಶ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News