ಜಿಲ್ಲೆಯ ವಿವಿಧೆಡೆ ಶಾಲಾ ಬಂದ್

Update: 2016-08-12 18:52 GMT

ಮಂಗಳೂರು, ಆ.12: ರಾಜ್ಯ ಸರಕಾರದ ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ ಹೆಸರಿನಲ್ಲಿ ಶಿಕ್ಷಕರನ್ನು ಕಡಿತಗೊಳಿಸುವ ಆದೇಶ ಜಾರಿಗೊಳಿಸಿದ್ದನ್ನು ವಿರೋಧಿಸಿ ಎಸ್‌ಎಫ್‌ಐ ಶುಕ್ರವಾರ ಜಿಲ್ಲೆಯ ಸರಕಾರಿ ಶಾಲಾ ಬಂದ್‌ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮುನ್ನೂರು ಗ್ರಾಮದ ಕುತ್ತಾರ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಿಪಂ ಅಧ್ಯಕ್ಷರ ಆದೇಶವನ್ನು ಪಾಲಿಸಲು ಹೇಳಿದ ಪೋಷಕರ ವಿರುದ್ಧ ಕ್ರಮ ಜರಗಿಸಿರುವುದು ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು.

ವಿದ್ಯಾರ್ಥಿನಿ ಆಯಿಶಾ ಅಫ್ರಾ ಮಾತನಾಡಿ, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಲು ಸರಕಾರವೇ ಕಾರಣವಾಗಿದೆ. ಮೂಲಭೂತ ಸೌಕರ್ಯ ನೀಡಿದರೆ ವಿದ್ಯಾರ್ಥಿಗಳು ಖಂಡಿತಾ ಸರಕಾರಿ ಶಾಲೆಗೆ ಬರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮುಸ್ತಫಾ, ಸದಸ್ಯ ಕಮಲಾಕ್ಷಿ ಮತ್ತು ಎಸ್‌ಎಫ್‌ಐ ಮುಖಂಡರಾದ ಲಿಮಿತಾ, ದೀಕ್ಷಿತ್ ಕಂಪ ಉಪಸ್ಥಿತರಿದ್ದರು.

ಜಿಲ್ಲೆಯ ಹರೇಕಳ ನ್ಯೂಪಡ್ಪು ಸರಕಾರಿ ಶಾಲೆ, ಎಲ್ಯಾರ್ ಪದವು, ಕಲ್ಕಟ್ಟ, ಮರಕಡ, ಬೆಂಗ್ರೆ, ಅಡ್ಡೂರು, ಮಂಜನಾಡಿ,ಉರುಮನೆ, ಬೈಕಂಪಾಡಿ, ಮೂಡುಶೆಡ್ಡೆ, ಉಳಾಯುಬೆಟ್ಟು, ಪಿಲಾರ್, ಕುಂಪಲ, ಕಣ್ಣೂರು, ಬಜಾಲ್, ಆಂಬ್ಲಮೊಗರು ಮೊದಲಾದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲಾ ಬಂದ್ ನಡೆಸಿದರು.

ನೆಲ್ಯಾಡಿ: ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ  

 ಇಲ್ಲಿನ ಸರಕಾರಿ ಉನ್ನತ ಹಿ.ಪ್ರಾ.ಶಾಲೆಯ ನಾಲ್ವರು ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಿ ವರ್ಗಾವಣೆ ಮಾಡುತ್ತಿರುವುದನ್ನು ವಿರೋಧಿಸಿ ಶುಕ್ರವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಶಿಕ್ಷಕರನ್ನು ಕೂಡಿ ಹಾಕಿ ತರಗತಿ ಕೊಠಡಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಶಾಲೆಗೆ ಆಗಮಿಸಿದ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಎಸ್‌ಡಿಎಂಸಿ, ಪೋಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿ ಅವರ ಮನವೊಲಿಕೆ ಮಾಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದೆಗೆದುಕೊಂಡು ತರಗತಿಗೆ ಹಾಜರಾದರು. ಎಸ್‌ಡಿಎಂಸಿ ಸದಸ್ಯರ ರಾಜೀನಾಮೆ: ಶಿಕ್ಷಕರ ವರ್ಗಾವಣೆ ವಿರೋಧಿಸಿ ಎಸ್‌ಡಿಎಂಸಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

ಮುನ್ನೂರು: ಶಿಕ್ಷಕರ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ವಿರೋಧಿಸಿ ಕುತ್ತಾರು ಮುನ್ನೂರು ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಶಾಲಾ ಆವರಣದ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಎಸ್ಸೆಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ಕಾರ್ಯಕರ್ತ ದೀಕ್ಷಿತ್ ಕಂಪ, ಎಸ್ಸೆಫ್‌ಐ ಬಟ್ಟೆದಡಿ ಘಟಕಾಧ್ಯಕ್ಷೆ ಲಿಮಿತಾ, ಮುನ್ನೂರು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮುಸ್ತಾಫಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News