ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ದ್ವೈವಾರ್ಷಿಕ ಕಾರ್ಯಕ್ರಮಗಳ ಅವಲೋಕನ

Update: 2016-08-13 12:46 GMT

 ಮಂಗಳೂರು, ಆ.13:ಸೌಹಾರ್ದ ವಾತವರಣವಿಲ್ಲದ ಪ್ರಸಕ್ತ ಪರಿಸ್ಥಿತಿಯಲ್ಲಿ ಅಕಾಡೆಮಿಗಳು ಸಮಾಜದಲ್ಲಿ ಸೌಹಾರ್ದ ವಾತವರತಣವನ್ನು ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಯ್ದಿನ್ ಹೇಳಿದರು.

ಅವರು ಇಂದು ಅತ್ತಾವರದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ಯಲ್ಲಿ ನಡೆದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ದ್ವೈ ವಾರ್ಷಿಕ ಕಾರ್ಯ ಕ್ರಮಗಳ ಅವಲೋಕನ ಕಾರ್ಯಕ್ರಮಗಳ ಡಿವಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬ್ಯಾರಿ ಅಕಾಡೆಮಿಯು ಬೇರೆ ಬೇರೆ ಸಮುದಾಯಗಳನ್ನು ಒಟ್ಟುಗೂಡಿಸಿ ಸೌಹಾರ್ದತೆಯನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಲ್ಕಿರಿ ವಿಶೇಷಾಂಕವನ್ನು ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಂ ಟೀಕೇ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಇತರ ಅಕಾಡೆಮಿಗಳಿಗಿಂತ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಬ್ಯಾರಿ ಅಕಾಡೆಮಿಯು ಸರಕಾರವು ಸಮುದಾಯಕ್ಕೆ ಕೊಟ್ಟಿರುವ ಅಕಾಡೆಮಿಯಾಗಿದೆ. ಸಮುದಾಯಗಳನ್ನು , ಸಮುದಾಯದ ಸಾಹಿತ್ಯ ,ಕಲೆ, ಸಾಂಸ್ಕೃತಿಕ ಕಾರ್ಯವನ್ನು ಮಾಡುವ ಸಂಘಟನೆಗಳನ್ನು ವಿಶ್ವಾಸ ತೆಗೆದುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಯ ಅಧ್ಯಕ್ಷ ಬಿ. ಎ.ಮುಹಮ್ಮದ್ ಹನೀಫ್, ಬ್ಯಾರಿ ಸಾಹಿತ್ಯ ಅಕಾಡೆಮಿಯು 30 ಸಾವಿರ ಪದಗಳುಳ್ಳ ಬ್ಯಾರಿ, ಕನ್ನಡ , ಇಂಗ್ಲೀಷ್ ನಿಘಂಟನ್ನು ತಯಾರಿಸಲಾಗುತ್ತಿದ್ದು ಡಿಸೆಂಬರ್‌ನಲ್ಲಿ ಮುದ್ರಣಕ್ಕೆ ಕಳುಹಿಸಲಾಗುವುದು. ಬ್ಯಾರಿ ವ್ಯಾಕರಣವನ್ನು ಶೀಘ್ರದಲ್ಲಿಯೆ ಮಾಡಲಾಗುವುದು. ಭಾಷೆ, ಕಲೆ, ಸಂಸ್ಕೃತಿಗೆ ಸಂಬಂಧಪಟ್ಟ ಉತ್ತಮ ಕೆಲಸ ಮಾಡಿದ ಆತ್ಮತೃಪ್ತಿ ಇದೆ. 400 ಮಂದಿ ದಫ್ ಕಲಾವಿದರಿಗೆ ದಫ್ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಇಂಗ್ಲಿಷ್ ನಿಘಂಟು ಸಂಪಾದಕ ಬಿ.ಎಂ.ಇಚ್ಲಂಗೋಡು, ಕಳೆದ ಎರಡು ವರ್ಷ ಬ್ಯಾರಿ ಸಾಹಿತ್ಯದ ಪುನರುತ್ಥಾನದ ಅವಧಿಯೆಂದರೆ ತಪ್ಪಾಗಲಾರದು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮಾಡುತ್ತಿರುವ ಕಾರ್ಯದಿಂದ 2 ವರ್ಷದಲ್ಲಿ ಉತ್ತಮ ಸಾಧನೆ ಆಗಿದೆ. ಹಿಂದಿನ 6 ವರ್ಷಗಳ ಅವಧಿಗೆ ಹೋಲಿಸಿದರೆ ಈಗಿನ 2 ವರ್ಷಗಳ ಸಾಧನೆ ಉತ್ತಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್‌ಎಂಪಿಟಿ ನಿವೃತ್ತ ಉಪನಿರ್ದೇಶಕ ಖಾಲಿದ್ ತಣ್ಣೀರು ಬಾವಿ , ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಎಂ.ಇ. ಮುಹಮ್ಮದ್ ಫಿರ್ದೌಸ್, ಅಬ್ದುಲ್ಲತೀಫ್ ನೇರಳಕಟ್ಟೆ , ಮುಹಮ್ಮದ್ ಶರೀಫ್ ನಿರ್ಮುಂಜೆ, ಮುಹಮ್ಮದ್ ಝಕಾರಿಯ ಕಲ್ಲಡ್ಕ ಮೊದಲದವರು ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು, ಟಿ.ಎ. ಅಲಿಯಬ್ಬ ಜೋಕಟ್ಟೆ ವಂದಿಸಿದರು.
ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News