ಪುತ್ತೂರು: ಧರೆಗುರುಳಿದ 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ

Update: 2016-08-13 12:00 GMT

ಪುತ್ತೂರು, ಆ.13: ಪುತ್ತೂರು ಸುಬ್ರಹ್ಮಣ್ಯ ರಸ್ತೆಯಲ್ಲಿರುವ ದರ್ಬೆ ಸಮೀಪದ ಕಾವೇರಿಕಟ್ಟೆ ಎಂಬಲ್ಲಿ ಸುಮಾರು 500ರಿಂದ 600 ವರ್ಷಗಳಷ್ಟು ಹಿಂದಿನದು ಎನ್ನಲಾದ ಬೃಹತ್  ಅಶ್ವತ್ಥ ಮರವೊಂದು ಶನಿವಾರ ಉರುಳಿ ಬಿದ್ದಿದೆ. ಈ ಪ್ರದೇಶಕ್ಕೆ ಕಾವೇರಿಕಟ್ಟೆ ಎಂದು ಹೆಸರು ಬರಲು ಈ ಮರವೇ ಕಾರವಣವೆನ್ನಲಾಗಿದೆ.

ಬೃಹತ್ ಮರ ಟ್ರಾನ್ಸ್‌ಫಾರ್ಮರ್‌ಗೆ ಉರುಳಿ ಬಿದ್ದ ಕಾರಣ ವಿದ್ಯುತ್ ಕಡಿತವಾಗಿ ವಿದ್ಯುತ್ ತಂತಿಗಳು ಜೋತಾಡುತ್ತಿದ್ದವು. ಕೂಡಲೇ ಮೆಸ್ಕಾಂಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಿದರು. ಬೃಹತ್ ಮರ ಇದಾಗಿರುವುದರಿಂದ ಶನಿವಾರ ಮಧ್ಯಾಹ್ನದವರೆಗೆ ತೆರವು ಕಾರ್ಯ ನಡೆಯಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು. ಸ್ಥಳೀಯ ರಿಕ್ಷಾ ಚಾಲಕರು ಮತ್ತಿತರರು ಸಹಕರಿಸಿದರು.

ಸುಮಾರು 6 ತಲೆಮಾರುಗಳ ಹಿಂದೆ ಕಾವೇರಿ ಎಂಬ ಅಜ್ಜಿ ಮರದಡಿಯ ಕಟ್ಟೆಯಲ್ಲಿ ಕುಳಿತು ನೀರು ವಿತರಿಸುತ್ತಿದ್ದರಂತೆ. ಇದರಿಂದಾಗಿ ಈ ಕಟ್ಟೆಗೆ ಅಜ್ಜಿಯ ಹೆಸರನ್ನು ಇಡಲಾಗಿತ್ತಂತೆ. ಕಳೆದ 16 ವರ್ಷಗಳಿಂದ ಈ ಕಟ್ಟೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಸಲಾಗುತ್ತಿದೆ. ಪ್ರತಿ ಜನವರಿಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯೂ ಇಲ್ಲಿ ನಡೆಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News