ಒಕ್ಕೆತ್ತೂರು: ಸರಕಾರಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

Update: 2016-08-13 17:23 GMT

ಬಂಟ್ವಾಳ, ಆ. 13: ತಾಲೂಕಿನ ಒಕ್ಕೆತ್ತೂರು ಸರಕಾರಿ ಶಾಲೆಯ ಮೂವರು ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿಎಂಸಿ ಸದಸ್ಯರು, ಎಸ್‌ಎಫ್‌ಐ, ನಾಗರಿಕರು ಶಾಲೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪ್ರತಿಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ರಾಮಣ್ಣ ವಿಟ್ಲ, ಸರಕಾರಿ ಶಾಲೆಗಳ ನಾಶವನ್ನು ಸರಕಾರವೇ ಮಾಡಲು ಹೊರಟಿದೆ. ಹೆಚ್ಚುವರಿ ಶಿಕ್ಷಕರೆಂಬ ನೆಪದಲ್ಲಿ ಶಾಲೆಯಲ್ಲಿರುವ ಅನುಭವಿ ಶಿಕ್ಷಕರನ್ನು ವರ್ಗಾವಣೆ ಮಾಡುವ ಮೂಲಕ ಬಡ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಶಿಕ್ಷಣಾಧಿಕಾರಿ ಬರುವಂತೆ ಪ್ರತಿಟನೆಕಾರರು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ, ಶಾಸಕಿ ಟಿ.ಶಕುಂತಳಾ ಶೆಟ್ಟಿ, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯವಾಗಿದ್ದು ಶಿಕ್ಷಕರ ವರ್ಗಾವಣೆಯಿಂದ ಒಕ್ಕೆತ್ತೂರು ಶಾಲೆಯ ವಿದ್ಯಾರ್ಥಿಗಳಾಗುವ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಮಾತುಕತೆ ನಡೆಸಲಾಗುವುದು. ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುವುದರಿಂದ ಪ್ರತಿಭಟನೆ ಕೈಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.  ಬಳಿಕ ಸ್ಥಳಕ್ಕೆ ಆಗಮಿಸಿದ ವಿಟ್ಲ ವಲಯ ಶಿಕ್ಷಣ ಸಂಯೋಜಕಿ ಪುಷ್ಪಾ ಹಾಗೂ ಸಿಆರ್‌ಪಿ ಶಿವರಾಮರೊಂದಿಗೆ ಶಾಸಕಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಅಬೂಬಕರ್ ಒಕ್ಕೆತ್ತೂರು, ಲತಾವೇಣಿ, ದಮಾಯಂತಿ, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯ ಶರೀಫ್ ಕೊಡಂಗೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಅಝೀಝ್, ಸದಸ್ಯ ಸಿ.ಎಚ್ ಆರೀಶ್, ಮಾಜಿ ಉಪಾಧ್ಯಕ್ಷೆ ಸುನೀತಾ ರಾವ್, ಆರ್.ಕೆ. ಆರ್ಟ್ಸ್ ಚಿಣ್ಣರ ಮನೆಯ ರಾಜೇಶ್ ವಿಟ್ಲ, ವರ್ತಕರ ಸಂಘದ ವಿ.ಎಸ್ ಇಬ್ರಾಹೀಂ ಒಕ್ಕೆತ್ತೂರು, ಎಸ್‌ಎಪ್‌ಐ ಮುಖಂಡ ತುಳಸಿದಾಸ್, ಸಲೀಂ ಮಲಿಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News