‘ಆಳ್ವಾಸ್’ನಲ್ಲಿ 30 ಸಾವಿರ ಜನರ ಸಮ್ಮುಖದಲ್ಲಿ ಸ್ವಾತಂತ್ರ ಸಂಭ್ರಮ

Update: 2016-08-15 06:00 GMT

ಮೂಡುಬಿದಿರೆ, ಆ.15: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಂದು ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ಸಂಸ್ಥೆಯ 24 ಸಾವಿರ ವಿದ್ಯಾರ್ಥಿಗಳು ಸಹಿತ ಒಟ್ಟು 30 ಸಾವಿರ ಮಂದಿಯ ಸಮ್ಮುಖದಲ್ಲಿ 70ನೆ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

 ಮಂಗಳೂರು ಕ್ರೈಸ್ತ ಧರ್ಮಾಧ್ಯಕ್ಷರಾದ ಡಾ.ಅಲೋಶಿಯಸ್ ಪೌಲ್ ಡಿಸೋಜ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಎಲ್ಲರೂ ಏಕತೆಯಿಂದ ಬದುಕುವುದನ್ನು ಕಲಿಸುತ್ತದೆ. ಆದ್ದರಿಂದ ದೇವಾಲಯಗಳಿಗಿಂತ ಶಿಕ್ಷಣಾಲಯಗಳು ಶ್ರೇಷ್ಠವಾದುದು. ಸ್ವಚ್ಛತೆ, ಶುದ್ಧ ನೀರು, ಸಾರ್ವಜನಿಕ ಸೊತ್ತುಗಳನ್ನು ಜತನದಿಂದ ಕಾಪಾಡಿಕೊಳ್ಳುವುದು, ಕಾನೂನು ಪರಿಪಾಲನೆ, ಭ್ರಷ್ಟಚಾರಮುಕ್ತ ಸಮಾಜ ಕಟ್ಟುವುದರಿಂದ ಭಾರತದಲ್ಲಿ ಹೂಡಿಕೆ ಮಾಡಿ, ಆರ್ಥಿಕ ಪ್ರಗತಿಗೆ ಸಹಕಾರಿಯಾಗಬೇಕು. ಆ ಮೂಲಕ ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ದೇಶಾಭಿಮಾನವನ್ನು ಮೆರೆಯಬಹುದು ಹಾಗೂ ದೇಶಭಿಮಾನವನ್ನು ವ್ಯಕ್ತಪಡಿಸಬಹುದು. ಯುವಕರನ್ನು ಬಲಿಷ್ಠರಾಗಿಸುವುದರಿಂದ ದೇಶಕಟ್ಟುಲು ಸಾಧ್ಯ ಎಂದರು.

ಆಳ್ವಾಸ್ ಸಂಸ್ಥೆಯ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ವಂದೇ ಮಾತರಂ... ಕೋಟಿ ಕಂಠೋಸೆ... ಜನಗಣಮನ ಹಾಡಿದರು. ವೇದಿಕೆಯ ಮುಭಾಗದಲ್ಲಿದ್ದ 24 ಸಾವಿರ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸಿ ಸಂಭ್ರಮಿಸಿದರು. ತ್ರಿವರ್ಣದ ಬಲೂನುಗಳನ್ನು ಆಕಾಶದಲ್ಲಿ ತೇಲಿ ಬಿಡಲಾಯಿತು. ವಿಶೇಷ ಆಕರ್ಷಣೆಯಾಗಿ ತ್ರಿವರ್ಣ ಧಿರಿಸುಗಳನ್ನು ಧರಿಸಿದ ವಿದ್ಯಾರ್ಥಿಗಳು ಮಲ್ಲಕಂಬ, ಹುಲಿವೇಷ ಮಾದರಿಯಲ್ಲಿ ಆಕರ್ಷಕ ಪಿರಾಮಿಡ್ ಪ್ರದರ್ಶನ ನೀಡಿದರು.
ಇದೇ ಸಂದರ್ಭ ಸಿಇಟಿ ವೈದ್ಯಕೀಯ ವಿಭಾಗದಲ್ಲಿ ಮೊದಲ ರ್ಯಾಂಕ್ ಗಳಿಸಿದ ಅನಂತ್ ಜಿ., ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವೀತಿಯ ರ್ಯಾಂಕ್ ಪಡೆದ ದಕ್ಷಾ ಜೈನ್ ಹಾಗೂ ಆಶಿಕ್ ನಾರಾಯಣ್ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೆ ರ್ಯಾಂಕ್ ಗಳಿಸಿದ ಮಿಶನ್ ಕ್ವೀನಿ ಡಿಕಾಸ್ತರನ್ನು ಸನ್ಮಾನಿಸಲಾಯಿತು
ಶಾಸಕ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧಕ್ಷ ಡಾ.ಎಂ.ಮೋಹನ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ವಿನಯ್ ಆಳ್ವ, ಉದ್ಯಮಿ ಶ್ರೀಪತಿ ಭಟ್ ಸಹಿತ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News